ರವೀಂದ್ರ ಮುಕ್ತೇದಾರ
ಔರಾದ: ಬರ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ ಅವರು ಇತ್ತೀಚೆಗೆ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿದರು. ಜನ್ಮದಿನ ನಿಮಿತ್ತ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ವಾರದಿಂದ ತಾಲೂಕಿನ ಒಟ್ಟು 450 ಶಾಲೆಯ ವಿದ್ಯಾರ್ಥಿಗಳಿಗೆ 1.5 ಲಕ್ಷ ನೋಟ್ಬುಕ್‌ಗಳನ್ನು ವಿತರಿಸಿದ್ದಾರೆ.
ಶಾಸಕ ಪ್ರಭು ಚವ್ಹಾಣ ಅವರು ಪ್ರತಿವರ್ಷ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತರು, ಜನಸಾಮಾನ್ಯರು ಬರದ ನೆರಳಿನಲ್ಲಿ ಜೀವನ ಸಾಗಿಸುತ್ತಿರುವುದರಿಂದ ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ. ತಮಗೆ ಶುಭ ಕೋರಲು ಹೂವಿನ ಹಾರ, ಸಾಲು ಪೇಟಾ ತರುವ ಬದಲು ತಾಲೂಕಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಗೋ ಶಾಲೆಯಲ್ಲಿರುವ ಜಾನುವಾರುಗಳಿಗೆ, ರೈತರ ಬಳಿ ಇರುವ ಗೋವುಗಳಿಗೆ ಮೇವು ವಿತರಣೆ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ದರು.
ಶಾಸಕರು ತಮ್ಮ ಕಾರ್ಯಕರ್ತರಿಗೆ ಹೀಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಸೇರಿ ತಾಲೂಕಿನಲ್ಲಿ 1.5 ಲಕ್ಷ ನೋಟ್ಬುಕ್ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ನೋಟ್ ಬುಕ್ ತಂದು ಆಯಾ ಶಕ್ತಿ ಕೇಂದ್ರದ ಅಧ್ಯಕ್ಷರ ಸಮ್ಮುಖದಲ್ಲಿ ತಾಲೂಕಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ತಲಾ ಎರಡರಂತೆ ನೋಟ್ಬುಕ್ ವಿತರಿಸಿದ್ದಾರೆ.
ಈ ನೋಟ್ಬುಕ್ ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ, ಅಟಲ್ ಪಿಂಚಣಿ ಯೋಜನೆ, ಸ್ಕಿಲ್ ಇಂಡಿಯಾ, ಆಧಾರ್, ಉಜ್ವಲ ಭಾರತ, ಮೇಕಿನ್ ಇಂಡಿಯಾ, ಸ್ಮಾರ್ಟ್ ಸಿಟಿ, ರೂಪಿಯಾ ಕಾರ್ಡ್ ಸೇರಿದಂತೆ ಇಪ್ಪತ್ತು ಮಹತ್ವದ ಯೋಜನೆಗಳ ಮಾಹಿತಿಯನ್ನು ನೋಟ್ಬುಕ್ ಹಿಂಭಾಗದಲ್ಲಿ ಮುದ್ರಿಸಲಾಗಿದೆ. ಮುಖಪುಟದಲ್ಲಿ ಸ್ವಚ್ಛ ಭಾರತ ಸಂದೇಶ ಹಾಗೂ ‘ಸಾಥ್ ಆಯೇ ದೇಶ ಬನಾಯೇ’ ಎಂಬ ಸಂದೇಶಗಳನ್ನು ಅಳವಡಿಸುವ ಮೂಲಕ ನೋಟ್ಬುಕ್‌ನೊಂದಿಗೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ತಿಳಿಸಲಾಗಿದೆ. ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗದ ಪಾಲಕರ ಮಕ್ಕಳಿಗೆ ನೋಟ್ ಬುಕ್ ಸಿಕ್ಕಿರುವುದು ಖುಷಿ ನೀಡಿದೆ. ಬರದಲ್ಲಿ ಮಕ್ಕಳಿಗೆ ಎರಡು ನೋಟ್ ಬುಕ್ ವಿತರಣೆ ಮಾಡಿರುವುದು ಸಂತೋಷದ ವಿಷಯ ಎನ್ನುವುದು ಗ್ರಾಮೀಣ ಭಾಗದ ಜನರ ಮಾತು.