Advertisement

ಕಾರ್ಮಿಕ ಇಲಾಖೆ ಕಚೇರಿ ತೆರೆವುದೆಂದು?

12:26 PM Feb 12, 2020 | Naveen |

ಔರಾದ: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಲು ಮುಂದಾಗಬೇಕಾಗಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿ ಜಿಲ್ಲಾ ಕೇಂದ್ರದಲ್ಲಿ ಠಿಕಾಣಿ ಹೂಡುತ್ತಿದ್ದಾರೆ.

Advertisement

ಹೀಗಾದರೆ ಕಾರ್ಮಿಕರು ಸರ್ಕಾರಿ ಯೋಜನೆಯ ಲಾಭ ಪಡೆಯುವುದು ಹೇಗೆ ಎಂಬುದು ಕೂಲಿ ಕಾರ್ಮಿಕರ ಅಳಲು. ಇದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಮತಕ್ಷೇತ್ರ ಹಾಗೂ ಬೀದರ ಸಂಸದ ಭಗವಂತ ಖೂಬಾ ಅವರ ಸ್ವಂತ ಊರಿನಲ್ಲಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಚೇರಿಯ ಸ್ಥಿತಿಯಾಗಿದೆ. ಕಾರ್ಮಿಕರ ಇಲಾಖೆಯಿಂದ ಕೂಲಿ ಕಾರ್ಮಿಕರಿಗಾಗಿ ಬಂದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ನಿಜವಾದ ಫಲಾನುಭವಿಗಳಿಗೆ ಯೋಜನೆ ಮುಟ್ಟಿಸುವ ಕರ್ತವ್ಯ ಅಧಿಕಾರಿಗಳದು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಮಂಗಳವಾರ ಕಚೇರಿಗೆ ಬೀಗ ಹಾಕಿಕೊಂಡು ಬೀದರ ಜಿಲ್ಲಾ ಕೇಂದ್ರದಲ್ಲಿದ್ದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಕಚೇರಿಗೆ ದಿನಪೂರ್ತಿ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಕಾರ್ಮಿಕರ ಕಲ್ಯಾಣಕ್ಕಾಗಿಯೇ ಸರ್ಕಾರ ಜಾರಿಗೊಳಿಸಿದ ಆರೋಗ್ಯವಿಮೆ, ಕೂಲಿ ಕೆಲಸ ಮಾಡುವಾಗ ಸಣ್ಣಪುಟ್ಟ ಗಾಯವಾದಾಗ ಉಚಿತ ಆರೋಗ್ಯ ತಪಾಷಣೆ, ಕಾರ್ಮಿಕರ ಮಕ್ಕಳ ಮುದುವೆ ಖರ್ಚು, ವಿದ್ಯಾಭಾಸ ಮಾಡಲು ಶಿಷ್ಯ ವೇತನ, ಮೃತಪಟ್ಟರೆ ಪರಿಹಾರ ಸೇರಿದಂತೆ ಇನ್ನಿತರ ಯೋಜನೆಗಳನ್ನು ಸರ್ಕಾರ ಕೂಲಿ ಕಾರ್ಮಿಕರಿಗಾಯೇ ಜಾರಿಗೆ ತಂದಿದೆ. ಆದರೆ ಈ ಯೋಜನೆಗಳು ಇಂದಿಗೂ ಜನರಿಗೆ ಮುಟ್ಟುತ್ತಿಲ್ಲ ಎನ್ನುವುದು ಕೂಲಿ ಕಾರ್ಮಿಕರ ಆರೋಪವಾಗಿದೆ.

ಪ್ರತಿವರ್ಷ ಕೂಲಿ ಕಾರ್ಮಿಕರ ದಿನಚಾರಣೆಯನ್ನು ಅಧಿಕಾರಿಗಳು ಕೇವಲ ಕಾಟಚಾರಕ್ಕಾಗಿ ಆಚರಣೆ ಮಾಡುತ್ತಿದ್ದಾರೆ. ನಮ್ಮಂಥ ಬಡ ಕೂಲಿ ಕಾರ್ಮಿಕರಿಗೆ ಯೋಜನೆಯ ಲಾಭ ಒದಗಿಸಲು ಮುಂದಾಗುತ್ತಿಲ್ಲ. ಬದಲಿಗೆ ಮಧ್ಯವರ್ತಿಗಳಿಗೆ ತಿಳಿಸಿದರೆ ನಮಗೆ ಯೋಜನೆಯ ಕೆಲವು ಪ್ರಯೋಜನಗಳು ಅಲ್ಪಸ್ವಲ್ಪ ಸಿಗುತ್ತಿವೆ. ಬೀದರ ಮತ್ತು ಔರಾದ ತಾಲೂಕಿಗೆ ಓರ್ವ ಅಧಿಕಾರಿ ಇರುವ ಹಿನ್ನೆಲೆಯುಲ್ಲಿ ಔರಾದ ತಾಲೂಕು ಕೇಂದ್ರಕ್ಕೆ ಬಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಏನಾದರೂ ಕೆಲಸಗಳು ಇದ್ದರೆ ಮಾತ್ರ ಕಚೇರಿಗೆ ಬರುತ್ತೇನೆ. ಇಲ್ಲವಾದಲ್ಲಿ ಒರ್ವ ಸಿಬ್ಬಂದಿಯೇ ಕಚೇರಿಯ ಸಂಪೂರ್ಣ ನಿರ್ವಹಣೆ ಮಾಡುತ್ತಾರೆ ಎಂದು ಬಾಲಕಾರ್ಮಿಕ ನಿರೀಕ್ಷಕ ಪ್ರಸನ್ನಕುಮಾರ ತಿಳಿಸಿದ್ದಾರೆ.

ಸರ್ಕಾರ ನಮಗಾಗಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಂದು ಕೇಳಲು ಹದಿನೈದು ದಿನಗಳಿಂದ ಕಚೇರಿಗೆ ಅಲೆಯುತ್ತಿದ್ದೇವೆ. ಆದರೆ ಕಚೇರಿಗೆ ಓರ್ವ ಅಧಿಕಾರಿಯೂ ಬರುತ್ತಿಲ್ಲ. ನಮಗೆ ಮಾಹಿತಿ ನೀಡುತ್ತಿಲ್ಲ. ಈ ಕುರಿತು ತಹಶೀಲ್ದಾರ್‌ ಗೆ ಹಲವು ಬಾರಿ ಲಿಖೀತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಪ್ರತಿನಿತ್ಯ ಕಚೇರಿಯ ಬಾಗಿಲು ತಗೆದು ನಮಗೆ ನಮ್ಮ ಯೋಜನೆಯ ಲಾಭ ತಿಳಿಸಲು ತಾಲೂಕು ಮಟ್ಟದ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಬಡ ಕೂಲಿ ಕಾರ್ಮಿಕ ರಮೇಶ ತಿಳಿಸಿದ್ದಾರೆ.

Advertisement

ಇಲಾಖೆಯ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಪ್ರತಿನಿತ್ಯ ಕಚೇರಿಯ ಬಾಗಿಲು ತೆಗೆಯಬೇಕು. ಕೆಲಸದ ಬಗ್ಗೆ ನಿಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಸಬಂಧ ಪಟ್ಟ ಇಲಾಖೆ ಅಧಿಕಾರಿಗೆ ಆದೇಶ ಮಾಡುವೆ. ಎರಡು ದಿನಗಳಲ್ಲಿ ನಾನೇ ಖುದ್ದಾಗಿ ಕಚೇರಿಗೆ ಭೇಟಿ ನೀಡೆಸಿ ಪರಿಶೀಲನೆ ನಡೆಸುತ್ತೇನೆ.
ಪ್ರಭು ಚವ್ಹಾಣ,
ಜಿಲ್ಲಾ ಉಸ್ತುವಾರಿ ಸಚಿವ

ಬೀದರ ಹಾಗೂ ಔರಾದ ತಾಲೂಕಿಗೆ ನಾನೊಬ್ಬನೇ ಅಧಿಕಾರಿಯಾಗಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ಕೆಲಸಗಳು ಇರುತ್ತವೆ. ಹೀಗಾಗಿ ಬೀದರನಲ್ಲಿಯೇ ಇರುತ್ತೇನೆ. ಔರಾದನಲ್ಲಿ ಕೆಲಸ ಹೆಚ್ಚು ಇದ್ದಾಗ ಮಾತ್ರ ಕಚೇರಿಗೆ ಬರುತ್ತೇನೆ.
ಪ್ರಸನ್ನಕುಮಾರ,
ಬಾಲಕಾರ್ಮಿಕ ನಿರಿಕ್ಷಕ

ಹದಿನೈದು ದಿನಗಳಿಂದ ಪ್ರತಿನಿತ್ಯ ಕಚೇರಿಗೆ ಬಂದು ಹೋಗುತ್ತಿದ್ದೇವೆ. ಕಚೇರಿ ಬಾಗಿಲಿಗೆ ಬೀಗ ಹಾಕಿದ್ದೇ ಇರುತ್ತದೆ. ನಿರೀಕ್ಷಕ ಪಸನ್ನಕುಮಾರ ಅವರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಸಿಬ್ಬಂದಿ ಕೆಲಸದ ಮೇಲೆ ಹೋಗಿದ್ದಾರೆ ಎನ್ನುವ ಸುಳ್ಳು ಹೇಳಿಕೆ ನಿತ್ಯ ಹೇಳುತ್ತಿದ್ದಾರೆ. ಅದರಂತೆ ಮಂಗಳವಾರ ಕೂಡ ದಿನಪೂರ್ತಿ ಕಚೇರಿಗೆ ಬೀಗ ಹಾಕಲಾಗಿತ್ತು. ಕಚೇರಿಯ ಮುಂದೆ ಕುಳಿತುಕೊಂಡು ಸಾಕಾಗಿ ನಾವೇ ಮನೆಗೆ ಹೊಗಿದ್ದೇವೆ. ಆದರೆ ಅಧಿ ಕಾರಿ ಮಾತ್ರ ಬಂದೇ ಇಲ್ಲ.
ರಮೇಶ ಸಿಂಧೆ, ಕೂಲಿ ಕಾರ್ಮಿಕ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next