Advertisement
ಎರಡು ವರ್ಷಗಳಿಂದ ತಾಲೂಕಿನಲ್ಲಿ ವಾಡಿಕೆ ಮಳೆಯಾಗಿಲ್ಲ. ಆದರೂ ರೈತ ರಾಮರಾವ್ ರೂಪಲಾ ಜಾಧವ ತಮ್ಮ ಎರಡು ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮೂಲಕ ಮಾದರಿ ಕೃಷಿ ಕಾಯಕ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಬರ ಆವರಿಸಿ ಕುಡಿಯುವ ನೀರಿಗಾಗಿ ಜನರು ಸಮಸ್ಯೆ ಎದುರಿಸುವ ಸ್ಥಿತಿ ಬಂದಿತ್ತು. ಇದೀಗ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ತಾಲೂಕಿನ ಅರವತ್ತು ಗ್ರಾಮಗಳಲ್ಲಿ ನಿತ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ಹನಿ ನೀರಾವರಿ ಮೂಲಕ ತಮ್ಮ ಹೊಲದಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ.
Related Articles
Advertisement
ತಾಲೂಕಿನಲ್ಲಿ ಮಳೆ-ಬೆಳೆ ಇಲ್ಲದಿರುವುದರಿಂದ ಆದಾಯವಿಲ್ಲದೇ ಕಂಗಾಲಾದ ರೈತರು ಒಂದೆಡೆ ಇದ್ದರೆ, ಕಡಿಮೆ ನೀರಿನಲ್ಲೇ ಉತ್ತಮ ಬೆಳೆ ಬೆಳೆದು ಕೈ ತುಂಬ ಹಣ ಸಂಪಾದನೆ ಮಾಡುವವರೂ ಇದ್ದಾರೆ ಎಂಬುದಕ್ಕೆ ಈ ರೈತ ನಿದರ್ಶನ. ಎರಡು ಎಕರೆ ಭೂಮಿಯಲ್ಲೇ ವಾರಕ್ಕೆ 20 ಕ್ವಿಂಟಲ್ ಮೆಣಸಿನಕಾಯಿ ಇಳುವರಿ ಬರುತ್ತಿದೆ ಎನ್ನುತ್ತಾರೆ ರೈತ ರಾಮರಾವ್ ರೂಪಲಾ. ನಾಲ್ಕು ವರ್ಷಗಳಿಂದ ನಿರಂತರವಾಗಿ ಮೆಣಸಿನಕಾಯಿ ಬೆಳೆದು ನಿರೀಕ್ಷೆಗೆ ಮೀರಿ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೇ ಅಕ್ಕ ಪಕ್ಕದ ಹೊಲದ ರೈತರಿಗೂ ಕೂಡ ಮೆಣಸಿನಕಾಯಿ ಬೆಳೆಯುವಂತೆ ಪ್ರೇರಣೆ ನೀಡಿ, ಸಕಾಲಕ್ಕೆ ರಸಗೊಬ್ಬರ ಹಾಗೂ ಔಷಧ ಸಿಂಪರಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.