Advertisement

ತಾಲೂಕಿಗಾಗಿ ಸಂತಪೂರ-ಔರಾದ ಶೀತಲ ಸಮರ

11:21 AM Sep 14, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಔರಾದ ತಾಲೂಕು ಕೇಂದ್ರವಾಗಿ ದಶಕಗಳು ಕಳೆದರೂ ಕೂಡ ಸಂತಪೂರ ಮತ್ತು ಔರಾದ ತಾಲೂಕು ಹೋರಾಟ ಸಮಿತಿಗಳ ಸದಸ್ಯರ ನಡುವೆ ತಾಲೂಕು ರಚನೆಯ ಬಗ್ಗೆ ಇಂದಿಗೂ ಶೀತಲ ಸಮರ ನಿರಂತರವಾಗಿ ನಡೆಯುತ್ತಿದೆ.

Advertisement

ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಕ್ಕೆ ಅಂಟಿಕೊಂಡಿರುವ ಕರ್ನಾಟಕದ ಕಿರೀಟ ತಾಲೂಕು ಎಂದು ಹೆಗ್ಗಳಿಕೆ ಪಡೆದ ಔರಾದ ತಾಲೂಕಿನ ಕಥೆ ಇದು. ಔರಾದ ತಾಲೂಕು ಕೇಂದ್ರವಾಗಿಸಿ ಸರ್ಕಾರ 1977ರಲ್ಲಿ ಆದೇಶ ಮಾಡಿದೆ. ಇದಕ್ಕೂ ಮೊದಲು ಸಂತಪೂರ ತಾಲೂಕು ಕೇಂದ್ರವಾಗಿತ್ತು. ಇದರಿಂದ ಸಂತಪೂರ ತಾಲೂಕು ಹೋರಾಟ ಸಮಿತಿ ಸದಸ್ಯರು ಸಂತಪೂರವನ್ನು ತಾಲೂಕು ಕೇಂದ್ರವಾಗಿ ಮಾಡುವಂತೆ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಔರಾದ ತಾಲೂಕಿನ ಪ್ರಮುಖ ಸಂಘ ಸಂಸ್ಥೆಗಳ ಮುಖಂಡರು ಸಂತಪೂರದಲ್ಲಿರುವ ಕಚೇರಿಗಳನ್ನು ಔರಾದಗೆ ತರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಎರಡೂ ತಾಲೂಕು ಹೋರಾಟ ಸಮಿತಿಯ ಸದಸ್ಯರು ಒಂದಾಗಿ ಹಾಗೂ ಬೀದರ ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಮಟ್ಟದ ಸಣ್ಣ ನೀರಾವರಿ ಇಲಾಖೆ, ಭೂಸೇನಾ ನಿಗಮ ಸೇರಿದಂತೆ ಇನ್ನುಳಿದ ಕಚೇರಿಗಳನ್ನು ತಾಲೂಕಿಗೆ ತಂದು, ಆ ಮೂಲಕ ಸಾರ್ವಜನಿಕರು ಇಲಾಖೆಯ ಮಾಹಿತಿ ಪಡೆದು ಅದರ ಲಾಭ ಪಡೆದುಕೊಳ್ಳುವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ನಾಯಕರ ರಾಜಕೀಯ: ತಾಲೂಕು ಕೇಂದ್ರ ಸ್ಥಾನಕ್ಕಾಗಿ ಎರಡೂ ಗ್ರಾಮಗಳ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ನಾಯಕರು ಎರಡೂ ಸಂಘಟನೆ ಮುಖಂಡರೊಂದಿಗೆ ಸೇರಿ ಸಮಸ್ಯೆ ಬಗೆ ಹರಿಸದೇ ಹೋರಾಟದ ಕಿಚ್ಚು ಹಚ್ಚುತ್ತಿದ್ದಾರೆ. ಔರಾದ ಹಾಗೂ ಸಂತಪೂರ ಕೇವಲ ಹತ್ತು ಕಿ.ಮೀ. ಅಂತರದಲ್ಲಿಯೇ ಇವೆ. 40 ಕಿ.ಮೀ. ಅಮತರದಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರಲು ಮುಂದಾಗಬೇಕು.

ಸಂತಪೂರ ತಾಲೂಕು ಕೇಂದ್ರ ಮಾಡುವಂತೆ 20-9-2008ರಂದು ಅಂದಿನ ವಡಗಾಂವ ಜಿಪಂ ಸದಸ್ಯ ರಾಜಶೇಖರ ನಾಗಮೂರ್ತಿ, ಮೀನಾಕ್ಷಿ ಸಂಗ್ರಾಮ, ನಂದಿನಿ ಚಂದ್ರಶೇಖರ, ರಮೇಶ ದೇವಕತೆ ಜಿಪಂ ಸದಸ್ಯರು ತಮ್ಮ ಆಡಳಿತಾವಧಿಯಲ್ಲಿ ಮನವಿ ಪತ್ರ ನೀಡಿದ್ದಾರೆ. ಅದರಂತೆ ನಾಗಮಾರಪಳ್ಳಿ, ಸಂತಪೂರ, ಚಂದ್ರಶೇಖರ, ಶೆಂಬೆಳ್ಳಿ, ಚಿಕಲಿ, ಜೋಜನಾ, ಖೇಡ್‌, ಬಳತ್‌, ಲಾಧಾ ಮತ್ತು ತೋರಣಾ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಕೂಡ ಪಂಚಾಯತನಲ್ಲಿ ಸಭೆ ನಡೆಸಿ ಒಪ್ಪಿಗೆ ಪತ್ರ ನೀಡಿ ಸರ್ಕಾರಕ್ಕೆ ಸಲ್ಲಿದ್ದಾರೆ.

Advertisement

ಸ್ಥಳಾಂತರ ವಾಗುತ್ತಿದೆ ತಾಲೂಕು: 1951ಕ್ಕಿಂತ ಮೊದಲು ಜನವಾಡ ತಾಲೂಕು ಕೇಂದ್ರವಾಗಿತ್ತು. 1951ರಿಂದ 1977ರ ತನಕ ಸಂತಪೂರ ತಾಲೂಕು ಕೇಂದ್ರವಾಗಿತ್ತು. 1977ರಿಂದ ಔರಾದನ್ನು ತಾಲೂಕು ಕೇಂದ್ರವಾಗಿಸಿ ಸರ್ಕಾರ ಆದೇಶ ಮಾಡಿದೆ. ಅಂದಿನ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು ಸಂತಪೂರ ತಾಲೂಕು ಕೇಂದ್ರದಿಂದ ಕಚೇರಿಗಳನ್ನು ರಾತ್ರೋರಾತ್ರಿ ಔರಾದಗೆ ಸ್ಥಳಾಂತರ ಮಾಡಿದ್ದಾರೆ ಎನ್ನುವುದು ಸಂತಪೂರ ಹೋರಾಟ ಸಮಿತಿ ಸದಸ್ಯರ ಮಾತು. ಹಿಗಾಗಿಯೇ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಹಲವು ವರ್ಷಗಳ ಕಾಲ ಸಂತಪೂರದ ಮಾರ್ಗವಾಗಿ ಔರಾದಗೆ ಬರಲು ಇಲ್ಲಿನ ಜನರು ಬಿಡುತ್ತಿರಲಿಲ್ಲ. ಹಾಗಾಗಿ ಅವರು ಬೇರೆ ಮಾರ್ಗವಾಗಿ ಬರುತ್ತಿದ್ದರು ಎಂದು ಸಂತಪೂರದ ಜನರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next