Advertisement

ಸೌಕರ್ಯಗಳಿಲ್ಲದೇ ನರಳುತ್ತಿವೆ ಅಂಗನವಾಡಿ ಕೇಂದ್ರ

03:12 PM Mar 12, 2020 | Naveen |

ಔರಾದ: ಪುಟಾಣಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿ ಆರೋಗ್ಯವಂತ ಜೀವನ ಸಾಗಿಸುವಂತೆ ಸಂದೇಶ ಸಾರುವ ಅಂಗನವಾಡಿ ಕೇಂದ್ರಗಳೇ ಇದೀಗ ಸ್ವಂತ ಕಟ್ಟಡ ಸೇರಿದಂತೆ ಇತರ ಸೌಕರ್ಯಗಳಿಲ್ಲದೇ ನರಳುವಂತಾಗಿದೆ.

Advertisement

ಇದು ಔರಾದ ಹಾಗೂ ಕಮಲನಗರ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಚೇರಿಗಳ ದುಸ್ಥಿತಿ. ಬಾಲ್ಯದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಂದ್ರ-ರಾಜ್ಯ ಸರ್ಕಾರಗಳು ಪ್ರತಿ ವರ್ಷ ಕೋಟ್ಯಂತರ ಅನುದಾನ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. ಆದರೆ ಇಲಾಖೆ ಅಧಿಕಾರಿಗಳ ನಿಲಕ್ಷ್ಯ ಹಾಗೂ ಸಿಬ್ಬಂ ದಿಗಳ ಸೇವಾ ಪ್ರಜ್ಞೆಯ ಕೊರತೆಯಿಂದ ತಾಲೂಕಿನ 30 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ.

ಔರಾದ ಮತ್ತು ಕಮಲನಗರ ತಾಲೂಕಿನಲ್ಲಿ 351 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 251 ಸ್ವಂತ ಕಟ್ಟಡ, ಗ್ರಾಪಂ ಕಚೇರಿಯಲ್ಲಿ
1, ಸಮುದಾಯ ಭವನದಲ್ಲಿ 3, ಸರ್ಕಾರಿ ಶಾಲೆಯಲ್ಲಿ 16, ಬಾಡಿಗೆ ಕಟ್ಟಡದಲ್ಲಿ 78 ಇದ್ದು ಇನ್ನು ನಿರ್ಮಾಣದ ಹಂತದಲ್ಲಿ 35 ಕಟ್ಟಡಗಳಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಳೆಗಾಂವ, ಬೋಂತಿ, ಹಕ್ಯಾಳ,ಬೋಪಳಗೀಡ ಸೇರಿದಂತೆ ಐದು ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತರಿಲ್ಲ. ಇನ್ನೂ 14 ಕೇಂದ್ರಗಳಲ್ಲಿ ಸಹಾಯಕರಿಲ್ಲ. ಇಲಾಖೆ ಗುರಿ ಪ್ರಕಾರ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ 29,133 ಮಕ್ಕಳು ಹಾಜರಾತಿ ಇರಬೇಕು. ಆದರೆ 27,644 ಮಕ್ಕಳು ಅಂಗನವಾಡಿಯಲ್ಲಿ ದಾಖಲಾಗಿದ್ದಾರೆ.

ತಾಲೂಕಿನ ಒಟ್ಟು 351 ಅಂಗನವಾಡಿ ಕೇಂದ್ರಗಳಲ್ಲಿ 27,664 ಮಕ್ಕಳ ಹಾಜರಾತಿ ಇದೆ. ಆರು ತಿಂಗಳಿಂದ ಮೂರು ವರ್ಷದ ಮಗುವಿಗೆ ದ್ರವರೂಪದ ಆಹಾರ ನೀಡಲಾಗುತ್ತಿದೆ. ಮೂರು ವರ್ಷದಿಂದ ಐದು ವರ್ಷದ ಮಕ್ಕಳಿಗೆ ಅನ್ನ, ಹಾಲು, ಮೊಟ್ಟೆ, ಕಾಳು, ಬೆಲ್ಲ ಹಾಗೂ ಮಧ್ಯಾಹ್ನ ಊಟ ನೀಡಲಾಗುತ್ತಿದೆ ಎಂಬ ಮಾಹಿತಿ ಅಂಗನವಾಡಿ ಕಚೇರಿಯಲ್ಲಿನ ಕಡತಗಳಲ್ಲಿದೆ. ಇಲಾಖೆ ನಿಯಮದಂತೆ ತಾಲೂಕಿನ ಒಂದು ಅಂಗನವಾಡಿ ಕಟ್ಟಡದಲ್ಲೂ ಮಕ್ಕಳಿಗೆ ಆಹಾರ ನೀಡುತ್ತಿಲ್ಲೆನ್ನುವ ಆರೋಪಗಳು ಕೇಳಿ ಬರುತ್ತಿವೆ.

Advertisement

ಕುಡಿಯುವ ನೀರಿಲ್ಲ: ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಹಾಗೂ ಗರ್ಭಿಣಿಯರಿಗೆ ಶುದ್ಧ ಕುಡಿಯುವ ನೀರು ಕೊಡಬೇಕೆನ್ನುವ ಉದ್ದೇಶದಿಂದ ಸರ್ಕಾರ ಕೆಲ ಕೇಂದ್ರಗಳಿಗೆ ನಿರ್ಮಿಸಿದ ನೀರಿನ ಟ್ಯಾಂಕ್‌ ಗಳು ವರ್ಷದಲ್ಲಿಯೇ ಗಾಳಿಗೆ ಉರುಳಿ ಹೋಗಿವೆ. ಅಂಗನವಾಡಿಗೆ ಮಾಡಲಾಗಿದ್ದ ಪೈಪ್‌ಲೈನ್‌ ಕಾಮಗಾರಿಯೂ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿಗೆ ಬಂದ ಮಕ್ಕಳು ಊರಿನಲ್ಲಿರುವ ತೆರೆದ ಬಾವಿ ಅಥವಾ ಶಿಕ್ಷಕರು ಕೊಡುವ ನೀರನ್ನೇ ಕುಡಿಯುವಂತಹ ಸ್ಥಿತಿ ಬಂದೊದಗಿದೆ.

ಶೌಚಾಲಯ ಕೊರತೆ: ಕೇಂದ್ರ-ರಾಜ್ಯ ಸರ್ಕಾರ ಶೌಚಾಲಯ ಕಟ್ಟಿಕೊಂಡು ಉಪಯೋಗಿಸುವಂತೆ ಜನ ಜಾಗೃತಿ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರಿಗೆ ಸರ್ಕಾರ ಅರಿವು ಮೂಡಿಸುತ್ತಿದೆ. ಆದರೆ ತಾಲೂಕಿನ 50 ಅಂಗನವಾಡಿಗಳನ್ನು ಬಿಟ್ಟು ಇನ್ನುಳಿದ ಕೇಂದ್ರಕ್ಕೆ ಬರುವ ಮಕ್ಕಳು, ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ರಸ್ತೆಯಲ್ಲಿಯೇ ಅಥವಾ ಅಕ್ಕಪಕ್ಕದ ಮನೆಗೆ ಹೋಗಿ ಮೂತ್ರ ವಿಸರ್ಜನೆ ಮಾಡುವಂತಹ ಸ್ಥಿತಿ ಇಂದಿಗೂ ಇದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಕಾಗದ ಪತ್ರ ವೀಕ್ಷಿಸುತ್ತಾರೆಯೇ ಹೊರತು ಅಂಗನವಾಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ಯೋಚಿಸುತ್ತಿಲ್ಲ ಎನ್ನುವ ಆರೋಪಗಳೂ ದಟ್ಟವಾಗಿವೆ.

ಬಾಲ್ಯದಲ್ಲಿ ಮಕ್ಕಳಿಗೆ ಅಪೌಷ್ಟಿಕತೆ ಬರಬಾರದೆನ್ನುವ ಉದ್ದೇಶದಿಂದ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಗುಣಮಟ್ಟದ ಆಹಾರ ಪೂರೈಸುತ್ತಿದೆ. ಸರ್ಕಾರ ಪೂರೈಸಿದ ಪೌಷ್ಟಿಕ ಆಹಾರ ಮಕ್ಕಳ ಹೊಟ್ಟೆಗೆ ಸೇರುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿವೆ.

ಶಿಥಿಲಾವಸ್ಥೆಯಲ್ಲಿ 42 ಕಟ್ಟಡಗಳು: ತಾಲೂಕಿನ ಮುಸ್ತಾಪುರ, ಠಾವರಾ ನಾಯ್ಕೆ ತಾಂಡಾ, ಕೊಳ್ಳೂರ, ಕಲಮನಗರ ಸೇರಿದಂತೆ ಒಟ್ಟು 42 ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಕಟ್ಟಡ ಮೇಲ್ಛಾವಣಿ ಬೀಳುವ ಹಂತಕ್ಕೆ ತಲುಪಿದೆ. ಮಳೆಗಾಲದಲ್ಲಿ ಮಳೆ ನೀರು ಮಕ್ಕಳ ಮೇಲೆ ಬೀಳುತ್ತದೆ. ಅಗತ್ಯ ಸೌಕರ್ಯ ಕಲ್ಪಿಸಿಕೊಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದು ವರ್ಷಗಳು ಕಳೆದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆಯರು ಉದಯವಾಣಿಗೆ ತಿಳಿಸಿದ್ದಾರೆ.

ತಾಲೂಕಿನ ಅಂಗನವಾಡಿಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡುವೆ. ನಾನೂ ಕೂಡ ಹೊಸದಾಗಿ ತಾಲೂಕಿಗೆ ಬಂದಿದ್ದು, ಹಂತ ಹಂತವಾಗಿ ಅಂಗನವಾಡಿಗಳ ಅಭಿವೃದ್ಧಿಗೆ ಶ್ರಮಿಸುವೆ.
ಶಂಭುಲಿಂಗ ಹಿರೇಮಠ,
ಶಿಶು ಅಭಿವೃದ್ಧಿ ಅಧಿಕಾರಿ, ಔರಾದ

ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಜೊತೆಗೆ ಅಂಗನವಾಡಿಗಳ ಸಂರಕ್ಷಿಸಿ ಅವುಗಳಿಗೆ ಅಗತ್ಯ ಸೌಕರ್ಯ ನೀಡಲು ಮುಂದಾಗಬೇಕು. ಆಗ ಮಾತ್ರ ಸರ್ಕಾರದ ಯೋಜನೆ ಯಶಸ್ವಿಯಾಗಲು ಸಾಧ್ಯ.
ಪ್ರಭುಶೆಟ್ಟಿ ಸೈನಿಕಾರ,
ಮುಖಂಡರು, ಸಂತಪುರ

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next