Advertisement

ಆಕಸ್‌, ಕ್ವಾಡ್‌ ಚೀನಕ್ಕೆ ಚಕ್ರವ್ಯೂಹ! 

12:24 PM Sep 24, 2021 | Team Udayavani |
ಜಗತ್ತಿನ ಬೇರೆ ಬೇರೆ ದೇಶಗಳ ಜತೆ ವ್ಯಾವಹಾರಿಕ ಸಂಬಂಧ ಮಾಡಿಕೊಂಡು ಅಮೆರಿಕದ ಸ್ಥಾನ ತುಂಬಬೇಕು ಎಂಬುದು ಚೀನದ ಮಹದಾಸೆ. ಜತೆಗೆ ಇಂಡೋ-ಫೆಸಿಫಿಕ್‌ ವಲಯದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲೂ ಚೀನ ಸಂಚು ಹಾಕಿಯೇ ಕೂತಿದೆ. ಇದಕ್ಕೆ ಪೂರಕವೆಂಬಂತೆ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನವನ್ನು ಬಳಸಿಕೊಳ್ಳಲೂ ಮುಂದಾಗಿದೆ. ಇದರ ನಡುವೆಯೇ ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ದೂರದ ಯುನೈಟೆಡ್‌ ಕಿಂಗ್‌ಡಮ್‌ ದೇಶಗಳು ಎರಡು ಒಕ್ಕೂಟಗಳ ಮೂಲಕ ಒಟ್ಟಾಗಿ, ಚೀನವನ್ನು ಸುತ್ತುವರಿದು ಮಣಿಸಲು ನೋಡುತ್ತಿವೆ... ಹಾಗಾದರೆ ಏನಿದು ಆಕಸ್‌? ಕ್ವಾಡ್‌ಗೂ ಇದಕ್ಕೂ ಏನು ವ್ಯತ್ಯಾಸ ಎಂಬ ಬಗ್ಗೆ ಇಲ್ಲಿದೆ ಒಂದು ನೋಟ...
Now pay only for what you want!
This is Premium Content
Click to unlock
Pay with

ಇಡೀ ಜಗತ್ತಿನ ಸೂಪರ್‌ ಪವರ್‌ ಆಗಲು ಹೊರಟಿರುವ ಚೀನಕ್ಕೆ ಹೊಸ ಹೊಸ ಭೀತಿಗಳು ಎದುರಾಗುತ್ತಿವೆ. ವ್ಯಾಪಾರದ ವಿಚಾರದಲ್ಲಿ ಅಮೆರಿಕವನ್ನು ಹಿಂದಿಕ್ಕಬೇಕು, ಜಗತ್ತಿನ ಬೇರೆ ಬೇರೆ ದೇಶಗಳ ಜತೆ ವ್ಯಾವಹಾರಿಕ ಸಂಬಂಧ ಮಾಡಿಕೊಂಡು ಅಮೆರಿಕದ ಸ್ಥಾನ ತುಂಬಬೇಕು ಎಂಬುದು ಚೀನದ ಮಹದಾಸೆ. ಜತೆಗೆ ಇಂಡೋ-ಫೆಸಿಫಿಕ್‌ ವಲಯದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲೂ ಚೀನ ಸಂಚು ಹಾಕಿಯೇ ಕೂತಿದೆ. ಇದಕ್ಕೆ ಪೂರಕವೆಂಬಂತೆ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನವನ್ನು ಬಳಸಿಕೊಳ್ಳಲೂ ಮುಂದಾಗಿದೆ. ಇದರ ನಡುವೆಯೇ ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ದೂರದ ಯುನೈಟೆಡ್‌ ಕಿಂಗ್‌ಡಮ್‌ ದೇಶಗಳು ಎರಡು ಒಕ್ಕೂಟಗಳ ಮೂಲಕ ಒಟ್ಟಾಗಿ, ಚೀನವನ್ನು ಸುತ್ತುವರಿದು ಮಣಿಸಲು ನೋಡುತ್ತಿವೆ… ಹಾಗಾದರೆ ಏನಿದು ಆಕಸ್‌? ಕ್ವಾಡ್‌ಗೂ ಇದಕ್ಕೂ ಏನು ವ್ಯತ್ಯಾಸ ಎಂಬ ಬಗ್ಗೆ ಇಲ್ಲಿದೆ ಒಂದು ನೋಟ…

Advertisement

ಆಕಸ್‌ ಪದ ಈಗ ಜಗತ್ತಿನ ರಾಜಕೀಯ ವಿದ್ಯಮಾನದಲ್ಲಿ ಕೇಳಿಬರುತ್ತಿದೆ. ಹಾಗೆಂದರೇನು?:

ಇದು ಒಂದು ತ್ರಿಪಕ್ಷೀಯ ಒಕ್ಕೂಟ. ಇದರಲ್ಲಿ ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. ಈ ಒಕ್ಕೂಟದ ಪ್ರಮುಖ ಉದ್ದೇಶವೇ, ಅಮೆರಿಕ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಬಳಿ ಇರುವ ಅತ್ಯಾಧುನಿಕ ರಕ್ಷಣ ವ್ಯವಸ್ಥೆಯನ್ನು ಆಸ್ಟ್ರೇಲಿಯಾದೊಂದಿಗೆ ಹಂಚಿಕೊಳ್ಳುವುದು. ಪ್ರಮುಖವಾಗಿ ಅಣ್ವಸ್ತ್ರ ಆಧರಿತ ಸಬ್‌ಮೆರಿನ್‌ಗಳನ್ನು ಆಸ್ಟ್ರೇಲಿಯಾಕ್ಕೆ ಒದಗಿಸುವ ಧ್ಯೇಯ ಇದರಲ್ಲಿದೆ. ಅಂದರೆ, ಅಮೆರಿಕದ ವರ್ಜೀನಿಯಾ ಕ್ಲಾಸ್‌ ವೆಸೆಲ್ಸ್‌ ಸಬ್‌ಮೆರಿನ್‌ ಅನ್ನು ಆಸ್ಟ್ರೇಲಿಯಾಕ್ಕೆ ನೀಡಬಹುದು. ಹಾಗೆಯೇ ಕೆಲವು ವರದಿಗಳ ಪ್ರಕಾರ, ಅಮೆರಿಕದ ಅತ್ಯಾಧುನಿಕ ಟಾಮ್‌ಹಾಕ್‌ ಕ್ರೂಸ್‌ ಮಿಸೈಲ್‌, ಜಾಯಿಂಟ್‌ ಏರ್‌ ಟು ಸರ್ಫೇಸ್‌ ಸ್ಟಾಂಡ್‌ ಆಫ್ ಮಿಸೈಲ್ಸ್‌, ಲಾಂಗ್‌ ರೇಂಜ್‌ ಆ್ಯಂಟಿ ಶಿಪ್‌ ಮಿಸೈಲ್ಸ್‌ ಹಾಗೂ ಕೃತಕ ಬುದ್ಧಿಮತ್ತೆ, ಸೈಬರ್‌ ಮತ್ತು ಕ್ವಾಂಟಮ್‌ ತಂತ್ರಜ್ಞಾನವನ್ನು ಆಸ್ಟ್ರೇಲಿಯಾದೊಂದಿಗೆ ಹಂಚಿಕೊಳ್ಳುವುದಾಗಿದೆ. ಅಷ್ಟೇ ಅಲ್ಲ, ಬ್ರಿಟನ್‌ನ ಬಿಎಇ ಸಿಸ್ಟಮ್‌ ಅಸ್ಟ್ಯುಟ್‌ ಕ್ಲಾಸ್‌ ಸಬ್‌ಮೆರಿನ್‌ ಅನ್ನೂ ಖರೀದಿಸಲು ಆಸ್ಟ್ರೇಲಿಯಾ ಚಿಂತನೆ ನಡೆಸಿದೆ.

ಆಕಸ್‌ನಲ್ಲಿ ಬೇರೆಯವರಿಗೆ ಅವಕಾಶವಿದೆಯೇ?:

ಅಮೆರಿಕವೇ ಹೇಳಿದಂತೆ ಖಂಡಿತವಾಗಿಯೂ ಇಲ್ಲ. ಇದು ಕೇವಲ ತ್ರಿಪಕ್ಷೀಯ ಒಕ್ಕೂಟ. ಹಾಗೆಯೇ ರಕ್ಷಣೆ ಸಂಬಂಧವಾಗಿಯೇ ಮಾಡಿಕೊಂಡಿರುವ ಕೂಟ. ಸದ್ಯದಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಎರಡು ದೇಶಗಳನ್ನು ಆಕಸ್‌ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಅಮೆರಿಕ ಸರಕಾರದ ವಕ್ತಾರರು, ಇಲ್ಲವೇ ಇಲ್ಲ ಎಂದಿದ್ದಾರೆ.

Advertisement

ಹಾಗಾದರೆ ಆಕಸ್‌ ಉದ್ದೇಶವೇನು?:

ಇದುವರೆಗೆ ಅಮೆರಿಕವಾಗಲಿ, ಯುಕೆಯಾಗಲಿ ಅಥವಾ ಆಸ್ಟ್ರೇಲಿಯವಾಗಲಿ ಈ ಒಕ್ಕೂಟದ ಉದ್ದೇಶವನ್ನು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಮೂಲಗಳು ಹೇಳಿದಂತೆ ಈ ಒಕ್ಕೂಟದ ಪ್ರಮುಖ ಉದ್ದೇಶವೇ ಚೀನವನ್ನು ಮಣಿಸುವುದು. ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಚೀನ ನಡೆಸುತ್ತಿರುವ ಆಟೋಟಗಳನ್ನು ನಿಲ್ಲಿಸುವುದು. ಅಲ್ಲದೇ ಚೀನವೇ ಈ ಒಕ್ಕೂಟದ ಬಗ್ಗೆ ಮಾತನಾಡಿದ್ದು, ತನ್ನನ್ನು ಗಮನದಲ್ಲಿಟ್ಟುಕೊಂಡೇ ಈ ಒಕ್ಕೂಟ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೆ ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿನ ಶಾಂತಿಯನ್ನು ಕದಡಲು ಅಮೆರಿಕ ನೋಡುತ್ತಿದೆ ಎಂದು ಆರೋಪಿಸಿದೆ.

ಫ್ರಾನ್ಸ್‌ಗೇಕೆ ಸಿಟ್ಟು?:

ನಿಜವಾಗಿ ಹೇಳಬೇಕು ಎಂದರೆ ಆಕಸ್‌ ರಚನೆ ಮಾಡಿಕೊಂಡಿದ್ದರ ಬಗ್ಗೆ ಫ್ರಾನ್ಸ್‌ನ ಆಕ್ಷೇಪವೇನೂ ಇಲ್ಲ. ಆದರೆ ಸಬ್‌ಮೆರಿನ್‌ಗಳನ್ನು ಒದಗಿಸುವ ಸಂಬಂಧ ಆಸ್ಟ್ರೇಲಿಯಾ, ತನ್ನ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದರ ಬಗ್ಗೆ ಫ್ರಾನ್ಸ್‌ಗೆ ಸಿಟ್ಟು ಬಂದಿದೆ. ಏಕೆಂದರೆ 2016ರಲ್ಲಿ ಆಸ್ಟ್ರೇಲಿಯಾ ಫ್ರಾನ್ಸ್‌ ಜತೆಗೆ ಸುಮಾರು 90 ಬಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿತ್ತು. ಈಗ ಈ ಒಪ್ಪಂದವನ್ನು ಆಸ್ಟ್ರೇಲಿಯಾ ರದ್ದು ಮಾಡಿತು. ಇದರಿಂದಾಗಿ ಫ್ರಾನ್ಸ್‌ನ ನೌಕಾ ಸಂಸ್ಥೆಗೆ ಬಹುದೊಡ್ಡ ನಷ್ಟವಾದಂತಾಗಿದೆ. ಇದು ಒಂದು ರೀತಿಯಲ್ಲಿ ಬೆನ್ನಿಗೆ ಚೂರಿ ಇರಿದ ಹಾಗೆ ಎಂದು ಫ್ರಾನ್ಸ್‌ ಪ್ರತಿಕ್ರಿಯೆ ನೀಡಿದೆ. ಅಷ್ಟೇ ಅಲ್ಲ, ಅಮೆರಿಕ ಮತ್ತು ಆಸ್ಟ್ರೇಲಿಯಾದಿಂದ ತನ್ನ ರಾಯಭಾರಿಗಳನ್ನೂ ಹಿಂದಕ್ಕೆ ಕರೆಸಿಕೊಂಡಿದೆ. ಆದರೂ ಈಗ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರೋನ್‌ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಇದರಿಂದ ಏನು ಲಾಭ?:

ಮೊದಲಿಗೆ ಆಸ್ಟ್ರೇಲಿಯಾ ಮತ್ತು ಚೀನ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ ದಕ್ಷಿಣ ಸಮುದ್ರದಲ್ಲಿ ಚೀನದ ಅಟಾಟೋಪ ಹೆಚ್ಚಾಗಿದ್ದು, ಪದೇ ಪದೆ ತನ್ನ ವ್ಯಾಪ್ತಿಯನ್ನು ಮೀರಿ ಚೀನ ಮುಂದಕ್ಕೆ ಬರುತ್ತಿದೆ. ಇದು ಆಸ್ಟ್ರೇಲಿಯಾಕ್ಕೆ ಸಹಿಸಲು ಆಗುತ್ತಿಲ್ಲ. ಅಲ್ಲದೆ, ಇಂಡೋ-ಫೆಸಿಫಿಕ್‌ ವಲಯದಲ್ಲಿ ಚೀನ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ನೋಡುತ್ತಿದೆ. ಒಂದು ಲೆಕ್ಕಾಚಾರದಲ್ಲಿ ಈ ಪ್ರದೇಶದಲ್ಲಿನ ಶಾಂತ ಸ್ಥಿತಿಯನ್ನು ಕದಡುವ ಲೆಕ್ಕಾಚಾರದಲ್ಲಿದೆ ಚೀನ. ಹೀಗಾಗಿ ಚೀನವನ್ನು ಸುಮ್ಮನಾಗಿಸಲು ಅಮೆರಿಕ ಹೂಡಿರುವ ತಂತ್ರಗಾರಿಕೆಯೇ ಈ ಆಕಸ್‌. ಅಮೆರಿಕ ನೇರವಾಗಿ ದಕ್ಷಿಣ ಸಮುದ್ರಕ್ಕೆ ಇಳಿದು, ಚೀನದೊಂದಿಗೆ ಯುದ್ಧ ಮಾಡುವುದಿಲ್ಲ. ಬದಲಾಗಿ ಚೀನದಿಂದ ಕೆಳಭಾಗದಲ್ಲಿರುವ ಆಸ್ಟ್ರೇಲಿಯಾವನ್ನು ಬಲಗೊಳಿಸಿದರೆ ಲಾಭ ಹೆಚ್ಚು. ಆಸ್ಟ್ರೇಲಿಯಾ ಇದುವರೆಗೆ ಅಣ್ವಸ್ತ್ರ ಆಧರಿತ ಸಬ್‌ಮೆರಿನ್‌ ಹೊಂದಿಲ್ಲ. ಅಮೆರಿಕ ಅಥವಾ ಬ್ರಿಟನ್‌ ಕೊಡುವ ಸಬ್‌ಮೆರಿನ್‌ನಿಂದ ಚೀನದ ಶಕ್ತಿ ಹೆಚ್ಚಾಗಿ, ಚೀನವನ್ನು ಕಟ್ಟಿ ಹಾಕಿದಂತೆ ಆಗುತ್ತದೆ. ಅಲ್ಲದೆ ಆಸ್ಟ್ರೇಲಿಯಾಕ್ಕೂ ಚೀನ ವಿರುದ್ಧ ದಿಟ್ಟವಾಗಿ ನಿಲ್ಲುವ ಶಕ್ತಿ ಬಂದಂತೆ ಆಗುತ್ತದೆ.

ಆಕಸ್‌ ಜನ್ಮ ತಳೆದಿರುವುದರಿಂದ ಕ್ವಾಡ್‌ ಒಕ್ಕೂಟ ಮಹತ್ವ ಕಳೆದು ಕೊಂಡೀತೇ?:

ಅಮೆರಿಕ, ಭಾರತ, ಜಪಾನ್‌ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿಕೊಂಡು ಮಾಡಿಕೊಂಡಿರುವ ಒಕ್ಕೂಟ ಕ್ವಾಡ್‌. ಇದರಲ್ಲಿ ರಕ್ಷಣಾತ್ಮಕ ಸಂಬಂಧಗಳ ಜತೆಗೆ ಬೇರೆ ಬೇರೆ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆಯೂ ಚರ್ಚೆ ನಡೆಯುತ್ತದೆ, ಒಪ್ಪಂದಗಳಾಗುತ್ತವೆ. ಈ ನಾಲ್ಕೂ ದೇಶಗಳಿಗೂ ಚೀನವೇ ಪ್ರಮುಖ ಎದುರಾಳಿ. ಹೀಗಾಗಿ ಎಲ್ಲ ದಿಕ್ಕುಗಳಿಂದಲೂ ಚೀನವನ್ನು ಎದುರಿಸಲು ವ್ಯೂಹಾತ್ಮಕವಾಗಿ ಚಿಂತನೆ ನಡೆಸಿ ಈ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಆದರೆ ಆಕಸ್‌ನ ಪ್ರಮುಖ ಉದ್ದೇಶವೇ ರಕ್ಷಣ ಒಪ್ಪಂದಗಳು. ಇದರಲ್ಲಿ ಹೆಚ್ಚು ಉಪಯೋಗವಾಗುವುದು ಆಸ್ಟ್ರೇಲಿಯಾಕ್ಕೆ.

ಆಕಸ್‌ ಬಗ್ಗೆ ಭಾರತ  ಹೇಳುವುದೇನು? :

ಆಕಸ್‌ ಅನ್ನು ರಕ್ಷಣ ಉದ್ದೇಶಕ್ಕಾಗಿಯೇ ಮೂರು ದೇಶಗಳು ಮಾಡಿಕೊಂಡಿವೆ. ಕ್ವಾಡ್‌ಅನ್ನು ಎಲ್ಲ  ರೀತಿಯ ವ್ಯವಹಾರಗಳಿಗಾಗಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಅದಕ್ಕೂ ಇದಕ್ಕೂ ಹೋಲಿಕೆ ಸಲ್ಲದು. ಹಾಗಾಗಿ ಆಕಸ್‌ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.