ಕಾಸರಗೋಡು: ಮಹತ್ವಾಕಾಂಕ್ಷೆಯ ಹೊಸದುರ್ಗ – ಪಾಣತೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಸಮಗ್ರ ವರದಿಯನ್ನು ತಯಾರಿಸಲು (ಡಿ.ಪಿ.ಆರ್.) ಸರ್ವೇ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ.
ಈ ಒಪ್ಪಂದಕ್ಕಿರುವ ಪ್ರಕ್ರಿಯೆ ಪೂರ್ತಿಗೊಳಿಸಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಈ ಜುಲೈ ಅಂತ್ಯದೊಳಗೆ ಅಂಗೀಕಾರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಒಪ್ಪಂದವನ್ನು ಖಚಿತಪಡಿಸಲು ಚೀಫ್ ಎಂಜಿನಿಯರ್‌ಅನುಮತಿ ಲಭಿಸುವುದರೊಂದಿಗೆ ವರದಿಯನ್ನು ಸಾರಿಗೆ ಸಚಿವಾಲಯದ ತಿರುವನಂತಪುರ ರೀಜಿನಲ್ ಕಚೇರಿಗೆ ಒಪ್ಪಿಸಲಾಗುವುದು. ಇದಕ್ಕಿರುವ ಪ್ರಾಥಮಿಕ ಪ್ರಕ್ರಿಯೆಗಳು ನಡೆದು ಬರುತ್ತಿವೆ. ಸಾರಿಗೆ ಸಚಿವಾಲಯದಿಂದ ಅನುಮತಿ ಪಡೆದುಕೊಂಡು ಮುಂದಿನ ತಿಂಗಳಲ್ಲಿ ಸರ್ವೇ ಆರಂಭಿಸಲು ಸಾಧ್ಯವಾಗಬಹುದೆಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಭರವಸೆ ವ್ಯಕ್ತಪಡಿಸಿದೆ.
ಹೊಸದುರ್ಗ – ಪಾಣತ್ತೂರು – ಮಡಿಕೇರಿ ಅಂತಾರಾಜ್ಯ ರಾಷ್ಟಿÅàಯ ಹೆದ್ದಾರಿ ಸಹಿತ ಕೇರಳ ರಾಜ್ಯದ ಒಟ್ಟು ಎಂಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕುರಿತಾಗಿ ವರದಿಯನ್ನು ಸಿದ್ಧಪಡಿಸಲು ಸರಕಾರ ನಿರ್ದೇಶಿಸಿದೆ. ರಾಷ್ಟಿÅàಯ ಹೆದ್ದಾರಿ ಕಾಮಗಾರಿ ಸಂಖ್ಯೆ ಹೆಚ್ಚಳದಿಂದಾಗಿ ಸಮಗ್ರ ವರದಿಯನ್ನು ಸಿದ್ಧಪಡಿಸಲು ವಿಳಂಬವಾಗಬಹುದಾದ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಅಂಬೋಣವಾಗಿದೆ.
ಹೊಸದುರ್ಗದಿಂದ ಪಾಣತ್ತೂರು ವರೆಗಿನ 44 ಕಿ.ಮೀ. ದೂರ ಸರ್ವೇಯನ್ನು ಪೂರ್ತಿಗೊಳಿಸಲು ಸುಮಾರು ಐದು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ. ಈ ಸರ್ವೇಗಾಗಿ ಕೇಂದ್ರ ಸಾರಿಗೆ ಇಲಾಖೆ ಎರಡೂವರೆ ಕೋಟಿ ರೂಪಾಯಿಯನ್ನು ಕಾದಿರಿಸಿದೆ. ಇದರಿಂದಾಗಿ ಕಳೆದ ಮೇ 16 ರಂದು ಸರ್ವೇ ನಡೆಸಲು ಒಪ್ಪಂದದ ಪ್ರಥಮ ಹಂತವನ್ನು ಪೂರ್ತಿಗೊಳಿಸಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಅಧಿಕಾರಿಗಳು ವರದಿಯನ್ನು ಕೇಂದ್ರ ಸರಕಾರಕ್ಕೆ ಸಮರ್ಪಿಸಿದ್ದಾರೆ.
ಸರ್ವೇಯ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪ್ರದೇಶದಲ್ಲಿ ವಾಹನಗಳ ದಟ್ಟಣೆ, ಮಣ್ಣಿನ ಗುಣ, ಎತ್ತರ ಮತ್ತು ತಿರುವು, ನಿರ್ಮಿಸಬೇಕಾಗಿ ಬರುವ ಸೇತುವೆಗಳ ಸಂಖ್ಯೆ, ರಸ್ತೆ ಹಾದುಹೋಗುವ ಅರಣ್ಯ ಪ್ರದೇಶದ ಅಧ್ಯಯನ, ಕಟ್ಟಡಗಳು, ಆರಾಧನಾಲಯಗಳು, ಜನಸಂಖ್ಯೆ, ವ್ಯಾಪಾರ ಸಂಸ್ಥೆಗಳ ಸಂಖ್ಯೆ ಮೊದಲಾದವುಗಳನ್ನು ಗುರುತಿಸಲಾಗುವುದು.
ಕರ್ನಾಟಕದಲ್ಲಿ ಹಾದು ಹೋಗುವ 76 ಕಿಲೋ ಮೀಟರ್ ದೂರದ ರಸ್ತೆಯ ಪ್ರಾಥಮಿಕ ಸರ್ವೇ ಪೂರ್ತಿಗೊಳಿಸಿ ಡಿ.ಪಿ.ಆರ್. ತಕ್ಕುದಾದ ಕ್ರಮಕ್ಕೆ ಮುಂದಾದರೂ ಗುತ್ತಿಗೆದಾರರ ಏಜೆನ್ಸಿ ಕೇವಲ ಒಂದೇ ಬಂದಿರುವುದರಿಂದ ಸರ್ವೇ ಪ್ರಕ್ರಿಯೆ ವಿಳಂಬವಾಗುತ್ತಿದೆ. ಕನಿಷ್ಠ ಮೂರು ಏಜನ್ಸಿಗಳಾದರೂ ಅರ್ಜಿ ಸಲ್ಲಿಸಬೇಕು. ಕನಿಷ್ಠ ಮೂರು ಏಜೆನ್ಸಿಗಳು ಬಂದಲ್ಲಿ ಮಾತ್ರವೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗುವುದು. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ಟೆಂಡರ್ ಕರೆದು ಶೀಘ್ರದಲ್ಲೇ ಕ್ರಮ ಪೂರ್ತಿಗೊಳಿಸಿ ಸರ್ವೇ ಆರಂಭಿಸಲು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗ ಮುಂದಾಗಿದೆ.