ಬೆಂಗಳೂರು: 1947ರಲ್ಲಿ ನಮಗೆ ಸ್ವಾತಂತ್ರ್ಯ ಲಭಿಸುವ ಜತೆಗೆ ಭಾರತವೂ ವಿಭಜನೆಯಾಯಿತು. ಇದರಿಂದ ಮೂರು ಕೋಟಿಗೂ ಹೆಚ್ಚು ಜನ ನಿರಾಶ್ರಿತರಾದರೆ, ಲಕ್ಷಾಂತರ ಜನ ಸಾವಿಗೀಡಾದರು ಎಂದು ಸಿಂಧೂ ದರ್ಶನ ಉತ್ಸವ ಸಮಿತಿ ಮಾರ್ಗದರ್ಶಕ ಇಂದ್ರೇಶ್ ಕುಮಾರ್ ತಿಳಿಸಿದ್ದಾರೆ.
ಸಿಂಧೂ ದರ್ಶನ ಉತ್ಸವ ಸಮಿತಿ ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ವಿ.ರಂಗನಾಥ್ ರಚಿಸಿರುವ “ಸಿಂಧೂ ದರ್ಶನ’ ಕೃತಿ ಇಂಗ್ಲಿಷ್ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆ.15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಎಂದು ಆಚರಿಸಲಾಗುತ್ತದೆ.
ಆದರೆ, 1947 ಆ.15 ರಂದು ಬ್ರಿಟಿಷರಿಂದ ಸ್ವಾತಂತ್ರ್ಯದ ಜತೆಗೆ ಅಖಂಡ ಭಾರತವೂ ವಿಂಗಡಣೆಯಾಗಿ ಪಾಕಿಸ್ತಾನ ಉದಯವಾಯಿತು. ಈ ವಿಂಗಡಣೆಯಿಂದ ಮೂರು ಕೋಟಿಗೂ ಹೆಚ್ಚು ಜನ ನೆಲೆಕಂಡುಕೊಳ್ಳಲಾಗದೆ ನಿರಾಶ್ರಿತರಾದರು. ಲಕ್ಷಕ್ಕೂ ಅಧಿಕ ಜನ ಘರ್ಷಣೆ, ಹಿಂಸಾಚಾರದಿಂದ ಹಸುನೀಗಿದರು ಎಂದರು.
ಸ್ವಾತಂತ್ರ್ಯದ ಲಾಭ: ಅಂದಿನ ಕಾಂಗ್ರೆಸ್ 1947ರಲ್ಲಿ ಬ್ರಿಟಿಷರ ಹಿಡಿತದಿಂದ ಭಾರತವು ಸ್ವಾತಂತ್ರ್ಯಗೊಂಡಿತು ಎಂದು ಮಾತ್ರ ಹೇಳುತ್ತದೆ. ಆದರೆ, ಅಖಂಡ ಭಾರತ ಇಬ್ಭಾಗವಾದ ಕುರಿತು ಮಾತನಾಡುವುದಿಲ್ಲ. ಕಾರಣ ಕಾಂಗ್ರೆಸ್‌ನ ಅಂದಿನ ನಿರ್ಣಯಗಳೇ ದೇಶ ವಿಭಜನೆಗೆ ಕಾರಣವಾಗಿದ್ದವು. ವಿಭಜನೆಯ ಕುರಿತು ಪ್ರಮಾಣಿಕವಾಗಿ ನಾನಾ ಸುಳ್ಳುಗಳನ್ನು ಪ್ರಚಾರ ಮಾಡುತ್ತಾ ದೇಶಕ್ಕೆ ಸ್ವಾತಂತ್ರಗೊಳಿಸಿದೆವು ಎಂದು ಹೇಳುತ್ತಾ ಅದರ ಲಾಭ ಪಡೆಯುತ್ತಾ ಬಂದಿದೆ ಎಂದು ಆರೋಪಿಸಿದರು.
ಜಮ್ಮುಕಾಶ್ಮೀರದಲ್ಲಿ ಇಂದಿಗೂ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಚೀನ ಆಕ್ರಮಿತ ಕಾಶ್ಮೀರ ಎಂಬ ಪ್ರದೇಶಗಳಿವೆ. ವಿಭಜನೆ ದಿನಗಳಿಂದಲೂ ಈ ಸಮಸ್ಯೆ ಮುಂದುವರಿದಿದೆ. ನಂತರ ಚೀನಾದೊಂದಿಗೆ ನಡೆದ ಒಪ್ಪಂದಗಳಿಂದ ಬಹುತೇಕ ಕಾಶ್ಮೀರವನ್ನು ನಾವು ಕಳೆದುಕೊಂಡೆವು. ಇನ್ನಾದರೂ ಪಾಕಿಸ್ತಾನ ಹಾಗೂ ಚೀನಾ ಆಕ್ರಮಿತ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕಾದ ಅನಿವಾರ್ಯತೆ ಇದೆ.
ಜಾತಿ ರಹಿತ ಸಮಾಜ ನಿರ್ಮಾಣ ಮಾಡಿದಾಗ ಮಾತ್ರ ದೇಶ ಪ್ರೇಮದ ಕಡೆ ಹೆಚ್ಚಿನ ಒತ್ತು ನೀಡಬಹುದು ಎಂದರು. ವಿಶ್ರಾಂತ ರಾಜ್ಯಪಾಲ ಹಾಗೂ ನಿವೃತ್ತ ನ್ಯಾ. ರಾಮಾಜೋಯಿಸ್ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ಎನ್.ತಿಪ್ಪೇಸ್ವಾಮಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಉಪಸ್ಥಿತರಿದ್ದರು.