ಕಾಸರಗೋಡು: ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ನೋವಿನ ಬಗ್ಗೆ ಕರ್ನಾಟಕ ಸರಕಾರ ಕೇವಲ ಹೇಳಿಕೆಗಳ ಮೂಲಕ ಸಾಂತ್ವನ ಮಾಡುವುದನ್ನು ಕೈಬಿಟ್ಟು ಪ್ರತ್ಯಕ್ಷವಾಗಿ ಪ್ರತಿಕ್ರಿಯಿಸುವಂತ ತುರ್ತು ಕೆಲಸ ಆಗಬೇಕಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಭಾಷಾ ಅಲ್ಪಸಂಖ್ಯಾಕ ಪ್ರದೇಶ ಕಾಸರಗೋಡಿನಲ್ಲಿ ಒಂದರಿಂದ ಹತ್ತನೇ ತರಗತಿ ತನಕ ಕನ್ನಡ ವಿದ್ಯಾರ್ಥಿಗಳು ಮಲಯಾಳ ಕಡ್ಡಾಯ ಕಲಿಯಬೇಕೆಂಬ ನೀತಿಯನ್ನು ಪ್ರತಿಭಟಿಸಿ ಹಾಗೂ ಕನ್ನಡಿಗರ ಇನ್ನಿತರ ಸವಲತ್ತುಗಳನ್ನು ಕೇರಳ ಸರಕಾರ ಕಸಿದು ಕೊಳ್ಳುವುದನ್ನು ವಿರೋಧಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕರ್ನಾಟಕದ ಕನ್ನಡಿಗರ ಬೆಂಬಲ ಪಡೆಯಲು ಜರಗಿದ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ಮೇಲಿನಂತೆ ತಿಳಿಸಿದರು.
ಈ ಕುರಿತು ಕರ್ನಾಟಕ ಸಚಿವರು,ಸಂಸದರು,ಶಾಸಕರು ಯಾವುದೇ ಮುತುವರ್ಜಿ ವಹಿಸದಿರುವುದು ಖೇದಕರವಾಗಿದೆ. ಶೀಘ್ರ ದಲ್ಲಿಯೇ ಕೇರಳ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಮನವರಿಕೆ ಮಾಡಲು ಕರ್ನಾಟಕದಿಂದ ಸರ್ವಪಕ್ಷ ನಿಯೋಗ ಹೋಗಬೇಕೆಂದು ಅವರು ಒತ್ತಾಯಿಸಿದರು.ಈ ಬಗ್ಗೆ ಆಗಸ್ಟ್ 18 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬೃಹತ್ ಪ್ರತಿಭಟನೆ
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಕಾಸರಗೋಡು ಕನ್ನಡಿಗರು ಮತ್ತು ಕನ್ನಡ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರಗಲಿದೆ ಎಂದ ವರು ತಿಳಿಸಿದರು.
ಕನ್ನಡ ಸೇನೆಯ ಮುಖಂಡ ರವಿ ಕುಮಾರ್ ಬೆಂಗಳೂರು, ಕನ್ನಡ ಹೋರಾಟ ಸಮಿತಿಯ ಮುಖಂಡರಾದ ಭಾಸ್ಕರ ಕಾಸರಗೋಡು,ಮಹಾಲಿಂಗೇಶ್ವರ ಭಟ್, ಶಿವರಾಮ ಕಾಸರಗೋಡು,ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಕಾಸರ ಗೋಡು, ಶ್ರೀಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.