Advertisement

Aug 09: ಎಚ್ಎಸ್ಎಫ್‌ ಸಿ-ಇಸ್ರೋ ವತಿಯಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ

12:36 PM Aug 08, 2024 | Team Udayavani |

ಗದಗ: ನಗರದ ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಕಲಾಮಂದಿರದಲ್ಲಿ ಇಸ್ರೋ, ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ಆ. 9ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವಿಯ ಪ್ರಭಾರ ಕುಲಪತಿ, ಕುಲಸಚಿವ ಸುರೇಶ ನಾಡಗೌಡರ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಅಹಮದಾಬಾದ್ ನ ಭೌತಿಕ ಸಂಶೋಧನಾ ಪ್ರಯೋಗಾಲಯದ ಅಧ್ಯಕ್ಷ, ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್. ಕಿರಣಕುಮಾರ, ವಿಜ್ಞಾನಿ ಎಂ. ಶಂಕರನ್ ಪಾಲ್ಗೊಳ್ಳುವರು. ಇಸ್ರೋ ಉಪಕೇಂದ್ರದ ಯು.ಆರ್. ರಾವ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಸ್ರೋ ಹಾಗೂ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಜಿಲ್ಲೆಯ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 1,000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಭಾಗವಾಗಿ ಇಸ್ರೋ ಮತ್ತು ಚಂದ್ರಯಾನ ಮಿಷನ್ ನ ಸಾಧನೆಗಳನ್ನು ಬಿಂಬಿಸುವ ಪ್ರದರ್ಶನ, ಚಂದ್ರಯಾನ-3, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನ, ಚಂದ್ರಯಾನ ಮತ್ತು ಗಗನಯಾನಗಳ ಕುರಿತು ಪ್ರದರ್ಶಿಸಲಾದ ಚಲನಚಿತ್ರಗಳ ಕುರಿತು ರಸಪ್ರಶ್ನೆ ಸ್ಪರ್ಧೆ ಮತ್ತು ತಾಂತ್ರಿಕ ಸಂಭಾಷಣೆಯನ್ನು ಒಳಗೊಂಡ ಸರಣಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಇಸ್ರೋದಿಂದ ವಾಟರ್ ರಾಕೆಟ್‌ನ ಅದ್ಭುತ ಪ್ರದರ್ಶನವೂ ನಡೆಯಲಿದೆ. “ಚಂದ್ರನನ್ನು ಸ್ಪರ್ಶಿಸುವುದರೊಂದಿಗೆ ಜೀವನವನ್ನು ಸ್ಪರ್ಶಿಸುವುದು” ಎಂಬ ವಿಷಯದ ಮಾದರಿ ಮತ್ತು ಪೋಸ್ಟರ್ ಪ್ರಸ್ತುತಿಯನ್ನು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಮಧ್ಯಾಹ್ನದ ಅಧಿವೇಶನದಲ್ಲಿ ನಡೆಯಲಿದೆ. ಪೋಸ್ಟರ್ ಪ್ರಸ್ತುತಿ ಮತ್ತು ಮಾದರಿ ಪ್ರಸ್ತುತಿ ವಿಜೇತರಿಗೆ ತಲಾ 25 ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.

Advertisement

ಇಸ್ರೋ ಸಾಧನೆಗಳನ್ನು ಬಿಂಬಿಸುವ ಪ್ರದರ್ಶನವು ಮಧ್ಯಾಹ್ನ 2:30ಕ್ಕೆ ಜರುಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಅಬ್ದುಲ್ ಅಜೀಜ್ ಮುಲ್ಲಾ, ಉಮೇಶ ಬಾರಕೇರ, ಪ್ರಶಾಂತ ಮೇರವಾಡೆ, ಗಿರೀಶ ದೀಕ್ಷಿತ, ರಾಜೇಂದ್ರಸಿಂಗ್ ಬ್ಯಾಳಿ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next