Advertisement

10 ವರ್ಷಗಳಿಂದ ಸಲ್ಲಿಕೆಯಾಗದ ಆಡಿಟ್‌;ಕಡ್ಡಾಯ ವರದಿ ಸಲ್ಲಿಸಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

11:27 PM Feb 11, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಮುಜರಾಯಿ ದೇವಸ್ಥಾನಗಳಲ್ಲಿನ ಖರ್ಚು-ವೆಚ್ಚದ ಬಗ್ಗೆ ಪ್ರತಿ ವರ್ಷವೂ ಲೆಕ್ಕಪತ್ರ ವರದಿ ಸಲ್ಲಿಸುತ್ತಿದ್ದುದು ಕೇವಲ 4 ದೇಗುಲ.

Advertisement

ಹೌದು, ಈ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದ್ದು, ಸ್ವತಃ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರೇ ಆಡಿಟ್‌ ವರದಿ ನೀಡುವಂತೆ ದೇಗುಲಗಳ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇವರ ಸೂಚನೆಯನ್ವಯ ಸದ್ಯ ಎ ಮತ್ತು ಬಿ ದರ್ಜೆಯ 52 ದೇಗುಲಗಳು ಮಾತ್ರ ಲೆಕ್ಕಪತ್ರ ವರದಿ ಸಲ್ಲಿಕೆ ಮಾಡಿವೆ. ಉಳಿದ ದೇಗುಲಗಳೂ ಮಾ. 30ರ ಒಳಗೆ ಆಡಿಟ್‌ ವರದಿ ಸಲ್ಲಿಸುವಂತೆ ಗಡುವು ನೀಡಲಾಗಿದೆ.

ಮುಜರಾಯಿ ದೇವಸ್ಥಾನಗಳ ಹುಂಡಿಗಳಿಗೆ ಭಕ್ತರು ಹಾಕುವ ಹಣ ಹಾಗೂ ವಿವಿಧ ಪೂಜೆಗಳಿಂದ ಹಾಗೂ ಬಾಡಿಗೆ ಮತ್ತಿತರ ಮೂಲದಿಂದ ಸಂಗ್ರಹವಾಗುವ ಹಣದ ವಾರ್ಷಿಕ ಖರ್ಚು ವೆಚ್ಚವನ್ನು ‘ಎ’ ಮತ್ತು ‘ಬಿ’ ದರ್ಜೆಯ ಎಲ್ಲ ದೇವಸ್ಥಾನಗಳು ಪ್ರತಿ ವರ್ಷ ಆಡಿಟ್‌ ಮಾಡಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ರಾಜ್ಯದ ಎ ಮತ್ತು ಬಿ ದರ್ಜೆಯ 346 ದೇವಸ್ಥಾನಗಳ ಪೈಕಿ ಕೇವಲ 4 ದೇವಸ್ಥಾನಗಳಲ್ಲಿ ಮಾತ್ರ ಪ್ರತೀವರ್ಷ ಅಡಿಟ್‌ ಆಗುತ್ತಿದೆ. ಉಳಿದ 342 ದೇವಸ್ಥಾನಗಳಲ್ಲಿ ಕಳೆದ 10 ವರ್ಷಗಳಿಂದ ಆಡಿಟ್‌ ನಡೆಸದೇ ಇರುವುದರಿಂದ ಇಲಾಖೆಗೆ ಆ ದೇವಸ್ಥಾನಗಳ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ದೊರೆಯದಂತಾಗಿದೆ.

ಇದನ್ನೂ ಓದಿ:ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ವಿರುದ್ಧ ಬಿಜೆಪಿ ಸರಣಿ ಟ್ವೀಟ್‌

 ಪಾರದರ್ಶಕತೆ ಉದ್ದೇಶ
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 34,563 ದೇವಸ್ಥಾನಗಳಿದ್ದು, ಅದರಲ್ಲಿ 25 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವ ಎ ದರ್ಜೆಯ 207, 5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಬಿ ದರ್ಜೆಯ 139 ಹಾಗೂ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸಿ ದರ್ಜೆಯ 34,217 ದೇವಸ್ಥಾನಗಳಿವೆ.

Advertisement

ವರದಿ ಸಲ್ಲಿಸುತ್ತಿದ್ದ 4 ದೇಗುಲ
ರಾಜ್ಯದ 346 ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಲ್ಲಿ ಪ್ರತೀವರ್ಷ ಕೇವಲ ನಾಲ್ಕು ದೇವಸ್ಥಾನಗಳಿಂದ ಮಾತ್ರ ಲೆಕ್ಕಪರಿಶೋಧನ ವರದಿ ಸಲ್ಲಿಕೆಯಾಗುತ್ತಿತ್ತು. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ, ಘಾಟಿಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಬೆಂಗಳೂರಿನ ಬನಶಂಕರಿ ದೇಸ್ಥಾನಗಳಿಂದ ಅಡಿಟ್‌ ವರದಿ ಸಲ್ಲಿಸಲಾಗುತ್ತಿದೆ. ಉಳಿದ ದೇವಸ್ಥಾನಗಳ ಆಡಳಿತ ಮಂಡಳಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರದ ಸುತ್ತೋಲೆ ನಂತರವೂ ಕೆಲವು ಆಡಳಿತ ಮಂಡಳಿಗಳು ಜನವರಿ 30 ರೊಳಗೆ ಆಡಿಟ್‌ ವರದಿ ಸಲ್ಲಿಕೆ ಮಾಡಲು ಹಿಂದೇಟು ಹಾಕಿದ್ದು, ಆಡಳಿತ ಮಂಡಳಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ನಂತರ ಮೊದಲ ಬಾರಿಗೆ 52 ದೇವಸ್ಥಾನಗಳು ಆಡಿಟ್‌ ವರದಿ ಸಲ್ಲಿಕೆ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next