Advertisement
ಈ ಆಡಿಯೋದಲ್ಲಿ ಮಾತನಾಡಿದವರು 11ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಸದಸ್ಯ ಸಂಪತ್ ಕುಮಾರ್ ಮತ್ತು 13ನೇ ವಾರ್ಡ್‌ನ ಜೆಡಿಎಸ್‌ಸದಸ್ಯ ಮಹೇಶ್ ಕುಮಾರ್ ಎನ್ನಲಾಗಿದೆ. ಈ ಆಡಿಯೋದಲ್ಲಿ ಅಧ್ಯಕ್ಷ ಹುದ್ದೆ ವೇಳೆ ಕೈಗೊಳ್ಳಬೇಕಾದ ನಿರ್ಧಾರ, ವಾರ್ಡ್‌ನಲ್ಲಿ ಕಾಮಗಾರಿ ನಡೆಯುವ ವೇಳೆ ಗುತ್ತಿಗೆದಾರರಿಂದ ತಾವು ಪಡೆಯಬೇಕಿರುವ ಕಮಿಷನ್, ರೆಸಾರ್ಟ್ ರಾಜಕೀಯಗಳೆಲ್ಲದರ ಬಗ್ಗೆ ಚರ್ಚೆ ನಡೆದಿದೆ. ಸುಮಾರು 20 ನಿಮಿಷಗಳ ಕಾಲ ನಡೆದಿರುವ ಈ ಚರ್ಚೆಯಿಂದ ಸಾರ್ವಜನಿಕರು ನೂತನ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಶೇ.5ರಷ್ಟು ಕಮೀಷನ್ ಪಡೆಯುವ ಬಗ್ಗೆ ಚರ್ಚೆ: 11ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಸಂಪತ್ ಕುಮಾರ್ ತನ್ನ ವಾರ್ಡ್‌ನಲ್ಲಿ ಈಗಾಗಲೇ 3.5 ಕೋಟಿ ವೆಚ್ಚದ ಕಾಮಗಾರಿ ನಡೆದರೆ, ಶೇ.5ರಷ್ಟು ಕಮಿಷನ್ ಎಂದರೂ 15 ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ. ಅಲ್ಲದೆ, ಹನೂರು ಪಟ್ಟಣ ನೂತನವಾಗಿ ತಾಲೂಕಾಗಿರುವುದರಿಂದ 100 ಕೋಟಿ ರೂ. ಅನುದಾನ, ರಸ್ತೆ ಯೋಜನೆ, ಒಳಚರಂಡಿ ಮಂಡಳಿ ಅನುದಾನ ಎಲ್ಲವೂ ಬರಲಿದೆ. ಶೇ.5ರಷ್ಟು ಕಮಿಷನ್ ಎಂದರೂ ಓರ್ವ ಶಾಸಕನಿಗೆ ಸರಿ ಸಮನಾಗಿ ಹಣ ಲಭಿಸಲಿದೆ. ಒಂದೊಮ್ಮೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾಗಿದ ಬಳಿಕ ತಮ್ಮ ಪಾಲಿನ ಶೇ.2ರಷ್ಟು ಕಮಿಷನ್ ಕೊಟ್ಟರು ಕೊಡುತ್ತಾರೆ. ಇಲ್ಲವಾದಲ್ಲಿ ಅವರೇ ಪಡೆದುಕೊಳ್ಳುತ್ತಾರೆ. ಆದ್ದರಿಂದ ಮೊದಲೇ ಮಾತುಕತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.
ಹಣ, ಹೆಂಡ , ಹೆಣ್ಣು ಕೊಡಬೇಕು: ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಮಹೇಶ್‌ಕುಮಾರ್ ತಮ್ಮ ಪಕ್ಷದಿಂದ 6 ಸದಸ್ಯರನ್ನೂ ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಬೇರೆಡೆಗೆ ಕರೆದೊಯ್ದು, ಚುನಾವಣೆ ದಿನ ವಾಪಸ್ಸು ಕರೆತರುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೆ ತನ್ನ ಕಷ್ಟದ ಬಗ್ಗೆ ಆ ದಿನಕ್ಕೆ ತಿಳಿಸುತ್ತೇನೆ. ತಾನು ಎಲ್ಲಿಯೂ ಬರುವುದಿಲ್ಲ ಎಂಬುದರ ಬಗ್ಗೆ ಅಭಿಪ್ರಾಯ ತಿಳಿಸಿದ್ದೇನೆ ಎಂಬುದಾಗಿ ಚರ್ಚಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸದಸ್ಯ ಸಂಪತ್‌ಕುಮಾರ್, ಇದನ್ನು ಎಲ್ಲಾ ಪಕ್ಷದಲ್ಲಿ ಮಾಡುತ್ತಾರೆ. ನಮ್ಮನ್ನು ಕಿಡ್ನಾಪ್ ಮಾಡಿ ಕರೆದೊಯ್ದರೆ ಕುಡಿಯಲು, ತಿನ್ನಲು, ಲಾಡ್ಜ್, ಅಗತ್ಯವಿದ್ದರೆ ಹೆಣ್ಣನ್ನೂ ಸಹ ನೀಡಲಿದ್ದಾರೆ. ನಿನಗೆ ರೆಸಾರ್ಟ್ ರಾಜಕೀಯ ತಿಳಿದಿಲ್ಲವೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು, ಕೆಲ ಸದಸ್ಯರ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಒಟ್ಟಾರೆ ಈ ಆಡಿಯೋ ಹನೂರು ಪಟ್ಟಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮುಂದೆ ಯಾವ ಸ್ವರೂಪ ಪಡೆಯಲಿದೆ ಕಾದು ನೋಡಬೇಕಿದೆ.
ಸದಸ್ಯತ್ವ ವಜಾಗೊಳಿಸಲು ಹೋರಾಟಕ್ಕೆ ತೀರ್ಮಾನ: ಪಟ್ಟಣ ಪಂಚಾಯ್ತಿ ನೂತನ ಸದಸ್ಯರು ದೂರವಾಣಿಯಲ್ಲಿ ಚುನಾವಣೆಯ ಬಗ್ಗೆ ಚರ್ಚೆ ಮಾಡಿರುವ ಧ್ವನಿ ಮುದ್ರಿಕೆ ವೈರಲ್ ಆಗಿದೆ. ಚುನಾವಣೆಯಲ್ಲಿ ಯಾವ ರೀತಿ ಗೆದ್ದು ಬಂದಿದ್ದಾರೆ. ಮುಂದೆ ಯಾವ ರೀತಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂಬುದರ ಬಗ್ಗೆ ಅವರ ಚರ್ಚೆ ನಡೆಸಿದ್ದಾರೆ. ಒಟ್ಟಾರೆ ಈ ಧ್ವನಿ ಮುದ್ರಿಕೆಯಿಂದ ಜನಪ್ರತಿನಿಧಿಗಳ ಮಾನ ಬೀದಿಗೆ ಬಂದಂತಾಗಿದೆ. ಈ ಧ್ವನಿ ಮುದ್ರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ, ದೂರು ದಾಖಲಿಸಿ ಅವರ ಸದಸ್ಯತ್ವವನ್ನು ವಜಾಗೊಳಿಸುವವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದೇನೆ ಎಂದು ಪಪಂ ಮಾಜಿ ಸದಸ್ಯರೊಬ್ಬರು ತಿಳಿಸಿದ್ದಾರೆ.