ಸಾಮಾನ್ಯವಾಗಿ ಸಿನಿಮಾಗಳ ಆಡಿಯೋ ಬಿಡುಗಡೆ ಕಾರ್ಯಕ್ರಮ ಎಂದರೆ ಒಂದಷ್ಟು ಮಂದಿ ಅತಿಥಿಗಳು, ಅವರಿಗೆ ಸನ್ಮಾನ, ಸನ್ಮಾನಿಸಿಕೊಂಡವರಿಂದ ಚಿತ್ರತಂಡದವರ ಬಗ್ಗೆ ಮಾತು, ಶಿಳ್ಳೆ, ಚಪ್ಪಾಳೆ … ಬಹುತೇಕ ಇಷ್ಟಕ್ಕೆ ಆಡಿಯೋ ಬಿಡುಗೆ ಕಾರ್ಯಕ್ರಮಗಳು ಮುಗಿದು ಹೋಗುತ್ತವೆ. ಆದರೆ, “ಕೆಲವು ದಿನಗಳ ನಂತರ’ ಚಿತ್ರದ ಆಡಿಯೋ ಬಿಡುಗಡೆ ವಿಭಿನ್ನವಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್ ಅತಿಥಿಯಾಗಿ ಬಂದಿದ್ದರು. ಜೊತೆಗೆ ನಾರಾಯಣ ನೇತ್ರಾಲಯದ ಡಾ ರಾಜ್‌ಕುಮಾರ್ ನೇತ್ರ ಕೇಂದ್ರದ ಸಿಬ್ಬಂದಿಗಳು ಕೂಡಾ ಅಲ್ಲಿದ್ದರು. ಜೊತೆಗೆ ನೂರು ಮಂದಿ ನೇತ್ರದಾನಿಗಳು ಕೂಡಾ.
ಹೌದು, “ಕೆಲವು ದಿನಗಳ ನಂತರ’ ಚಿತ್ರತಂಡ ನೂರು ಮಂದಿ ನೇತ್ರದಾನ ಮಾಡುವ ಮೂಲಕ ಅಂದು ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಡಾ ರಾಜ್‌ಕುಮಾರ್ ಅವರ ನೇತ್ರದಾನದ ಕುರಿತ ಸಂದೇಶವನ್ನು ತೋರಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಅಂದು ರಾಘವೇಂದ್ರ ರಾಜಕುಮಾರ್ ಖುಷಿಯಾಗಿದ್ದರು. ಅದಕ್ಕೆ ಎರಡು ಕಾರಣ, ಒಂದು ಕಾರ್ಯಕ್ರಮ ನಡೆದ ಚಾಮುಂಡೇಶ್ವರಿ ಸ್ಟುಡಿಯೋ, ಇನ್ನೊಂದು ಚಿತ್ರತಂಡದ ಮಂದಿಯ ಪ್ರಶಂಸಾರ್ಹ ಕೆಲಸ.
“ಈ ಜಾಗ ನಿಮಗೆ ಕೇವಲ ಒಂದು ಹಾಲ್ ಆಗಿರಬಹುದು, ಸಭಾಂಗಣ ಆಗಿರಬಹುದು. ಆದರೆ, ನಮ್ಮ ಕುಟುಂಬಕ್ಕೆ ಇದು ದೇವಸ್ಥಾನವಿದ್ದಂತೆ. ಸಾಕಷ್ಟು ನೆನಪುಗಳಿಗೆ, ಅಭೂತಪೂರ್ವ ಕ್ಷಣಗಳಿಗೆ ಈ ಸ್ಟುಡಿಯೋ ಸಾಕ್ಷಿಯಾಗಿದೆ. ಸಾಕಷ್ಟು ಸಿನಿಮಾಗಳ ಸೂಪರ್ ಹಿಟ್ ಹಾಡುಗಳು ಕಂಪೋಸ್ ಆಗಿರುವುದು ಇಲ್ಲೇ. ನಾನು ಕೂಡಾ ಇಲ್ಲಿ ಅನೇಕ ಹಾಡುಗಳನ್ನು ಹಾಡಿದ್ದೇನೆ’ ಎಂದ ಅವರು, “ಚಿತ್ರತಂಡ ಒಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ನೇತ್ರದಾನ ಮಾಡುವ ಮೂಲಕ ಅನೇಕರಿಗೆ ಬೆಳಕಾಗಲಿದೆ. ಹೊಸಬರ ಟ್ರೇಲರ್ ಕೂಡಾ ಭರವಸೆ ಮೂಡಿಸುವಂತಿದ್ದು, ಚಿತ್ರದ ಶತದಿನ ಕಾರ್ಯಕ್ರಮ ಇಲ್ಲೇ ಆಗುವಂತಾಗಲಿ. ಅದಕ್ಕೂ ನಾನೇ ಬರುತ್ತೇನೆ’ ಎನ್ನುತ್ತಾ ಚಿತ್ರತಂಡಕ್ಕೆ ಶುಭಕೋರಿದರು.
ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಸಮಾಜದಲ್ಲಿ ನಡೆಯುವ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದು, ಇಂದಿನ ಯುವ ಜನತೆಗೊಂದು ಸಂದೇಶವಿದೆ ಎಂಬುದು ನಿರ್ದೇಶಕರ ಮಾತು. ಚಿತ್ರಕ್ಕಾಗಿ ಗ್ರಾಫಿಕ್‌ನಲ್ಲೊಂದು ಮಗುವನ್ನು ಸೃಷ್ಟಿಸಿದ್ದು, ಈ ತರಹದ ಪ್ರಯತ್ನವನ್ನು ಬೇರೆ ಯಾರೂ ಮಾಡಿಲ್ಲ ಅನ್ನೋದು ನಿರ್ದೇಶಕರ ಮಾತು. ಚಿತ್ರವನ್ನು ಮುತ್ತುರಾಜ್, ವಸಂತ್‌ಕುಮಾರ್ ಹಾಗೂ ಚಂದ್ರಕುಮಾರ್ ಸೇರಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶುಭಾ ಪೂಂಜಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ರಾಕಿ ಸೋನು ಸಂಗೀತವಿದೆ.