Advertisement

“ಮಹಿರ”ಬೆನ್ನಿಗೆ ನಿಂತ ಪ್ರೇಕ್ಷಕ

11:14 PM Aug 01, 2019 | mahesh |

“ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ಚಿತ್ರರಂಗದವರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಒಂದೊಳ್ಳೆ ಚಿತ್ರ ಮಾಡಿರುವುದಕ್ಕೆ ತೃಪ್ತಿ ಇದೆ. ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಖುಷಿಯಾಗಿದೆ’ – ಹೀಗೆ ಹೇಳುತ್ತ ಮಾತಿಗಿಳಿದವರು “ಮಹಿರ’ ಚಿತ್ರದ ನಿರ್ದೇಶಕ ಮಹೇಶ್‌ ಗೌಡ.

Advertisement

ಕಳೆದ ವಾರವಷ್ಟೇ “ಮಹಿರ’ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡದ ಮೊಗದಲ್ಲಿ ನಗು ತರಿಸಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಮತ್ತು ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಮಹಿರ’ ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿತು. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಹೇಶ್‌ ಗೌಡ, “”ಮಹಿರ’ ನನ್ನ ಮೊದಲ ಚಿತ್ರವಾಗಿದ್ದರಿಂದ, ಸಹಜವಾಗಿಯೇ ಚಿತ್ರದ ಮೇಲೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆ ಇತ್ತು. ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ, ಎನ್ನುವ ಆತಂಕವೂ ಇತ್ತು. ಆದರೆ ಬಿಡುಗಡೆಯ ನಂತರದ ಬೆಳವಣಿಗೆಗಳು ನನಗೆ ನೆಮ್ಮದಿ, ಸಮಾಧಾನವನ್ನು ತಂದಿದೆ’ ಎಂದರು.

ಇನ್ನು ಚಿತ್ರದ ನಿರ್ಮಾಪಕ ವಿವೇಕ್‌ ಕೊಡಪ್ಪ ಕೂಡ ಚಿತ್ರದ ಬಿಡುಗಡೆಯ ನಂತರ ಸಿಗುತ್ತಿರುವ ರೆಸ್ಪಾನ್ಸ್‌ ಕಂಡು ಖುಷಿಯಾಗಿದ್ದಾರೆ. “ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು “ಮಹಿರ’ ನೋಡಲು ಬರುತ್ತಿರುವುದರಿಂದ, ನಿಧಾನವಾಗಿ ಚಿತ್ರದ ಗಳಿಕೆಯಲ್ಲೂ ಏರಿಕೆಯಾಗುತ್ತಿದೆ. ಮೊದಲ ಚಿತ್ರಕ್ಕೆ ಇಂಥದ್ದೊಂದು ರೆಸ್ಪಾನ್ಸ್‌ ಸಿಗುತ್ತಿರುವುದು ಖುಷಿಯಾಗುತ್ತಿದೆ’ ಎಂದರು.

ಚಿತ್ರದ ನಟಿ ಚೈತ್ರಾ ಆಚಾರ್‌ ಕೂಡ ಒಂದು ಒಳ್ಳೆಯ ಚಿತ್ರದ ಭಾಗವಾಗಿರುವುದಕ್ಕೆ ಖುಷಿಯನ್ನು ವ್ಯಕ್ತಪಡಿಸಿದರು. ಕನ್ನಡದಲ್ಲಿ ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳು ಬರುತ್ತಿದ್ದು, ಅದರಲ್ಲಿ ಹೊಸ ಪ್ರಯೋಗದಿಂದ ಕೂಡಿರುವ ಕೆಲವೇ ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗುತ್ತಿವೆ. ಈಗ ಆ ಚಿತ್ರಗಳ ಸಾಲಿಗೆ “ಮಹಿರ’ ಚಿತ್ರ ಕೂಡ ಸೇರ್ಪಡೆಯಾಗಿದ್ದು, “ಮಹಿರ’ ತನ್ನ ಕಥೆ ಹಾಗೂ ನಿರೂಪಣೆಯಿಂದ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗುತ್ತಿದೆ. ಇನ್ನು “ಮಹಿರ’ ಚಿತ್ರದಲ್ಲಿ ಮಲಯಾಳಂ ನಟಿ ವರ್ಜಿನಿಯ ರೊಡ್ರಿಗಸ್‌, ಚೈತ್ರಾ ಆಚಾರ್‌, ಬಾಲಾಜಿ ಮನೋಹರ್‌, ರಾಜ್‌. ಬಿ ಶೆಟ್ಟಿ, ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next