Advertisement

ಬೀರ್‌ಬಲ್‌ ಸಾಹಸದಲ್ಲಿ ಪ್ರೇಕ್ಷಕ ನಿರಾಳ

05:33 AM Jan 19, 2019 | |

“ಒಂದು ಕೊಲೆ, ಒಬ್ಬ ನಿರಪರಾಧಿ, ವಕೀಲನೊಬ್ಬನ ಹತ್ತಾರು ಆಯಾಮದ ತನಿಖೆ. ಫ‌ಲಿತಾಂಶ…? ಉತ್ತರ ಬೇಕಾದರೆ, ಯಾವುದೇ ಆಯಾಸವಿಲ್ಲದೆ “ಬೀರ್‌ಬಲ್‌’ನ ಸಾಹಸವನ್ನು ನೋಡಬಹುದು. ಕೊಲೆ ಮತ್ತು ತನಿಖೆ ಕುರಿತು ಈಗಾಗಲೇ ಹಲವು ಚಿತ್ರಗಳು ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಸೇರುವ ಚಿತ್ರ ಇದಾಗಿದ್ದರೂ, ನೋಡುಗನಿಗೆ ಎಲ್ಲೂ ಗೊಂದಲವಿಲ್ಲದೆ, ಆರಂಭದಿಂದ ಅಂತ್ಯದವರೆಗೂ ಕುತೂಹಲ ಕೆರಳಿಸುವ ಮೂಲಕ “ಬೀರ್‌ಬಲ್‌’ ಇಷ್ಟವಾಗುತ್ತಾನೆ.

Advertisement

ಈ “ಇಷ್ಟ’ಕ್ಕೆ ಕಾರಣ, ಹೊಸ ತರಹದ ಕಥೆ, ಚುರುಕಾದ ಚಿತ್ರಕಥೆ, ಗಂಭೀರದ ಜೊತೆ ಆಗಾಗ ಕಚಗುಳಿ ಇಡುವ ಸಂಭಾಷಣೆ, ಗೊಂದಲವಿರದ ನಿರೂಪಣೆ, ಕೊರತೆ ಕಾಣದ ತಾಂತ್ರಿಕತೆ. ಇವೆಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕೊಲೆಯ ನಿಜವಾದ ಆರೋಪಿಯನ್ನು ಪತ್ತೆ ಮಾಡುವ ವಕೀಲನ ಸಾಹಸಗಳು ಚಿತ್ರದ ಜೀವಂತಿಕೆಗೆ ಸಾಕ್ಷಿ. ಕೊಲೆ ಆರೋಪದಿಂದ ಶಿಕ್ಷೆ ಅನುಭವಿಸುತ್ತಿರುವ ಯುವಕನನ್ನು ನಿರಪರಾಧಿ ಎಂದು ಸಾಬೀತುಪಡಿಸುವ ಸಲುವಾಗಿ,

ಯುವ ವಕೀಲ ಯಾವೆಲ್ಲಾ ಆಯಾಮಗಳಿಂದ ಸಾಕ್ಷಿಗಳನ್ನು ಕಲೆಹಾಕುತ್ತಾನೆ ಎಂಬುದನ್ನು ಹಲವು ತಿರುವುಗಳೊಂದಿಗೆ ಕುತೂಹಲಭರಿತವಾಗಿ ತೋರಿಸಿರುವುದು ಸಿನಿಮಾದ ಪ್ಲಸ್‌. ಸಾಮಾನ್ಯವಾಗಿ ಇಂತಹ ಕಥೆಗಳನ್ನು ತೆರೆ ಮೇಲೆ ಅಳವಡಿಸುವ ಮುನ್ನ, ಸಾಕಷ್ಟು ತಯಾರಿ ಬೇಕು. ಆ ತಯಾರಿ ಎಷ್ಟರಮಟ್ಟಿಗೆ ಇದೆ ಅನ್ನುವುದಕ್ಕೆ ಹೌದೆನಿಸುವ ಅಂಶಗಳು ಮತ್ತು ವೇಗದ ಚಿತ್ರಕಥೆ ಸಾಕ್ಷಿ.

ಒಂದು ಕೊಲೆ ವಿಷಯ ಹಿಡಿದು, ಎರಡು ಗಂಟೆಗೂ ಹೆಚ್ಚು ಕಾಲ ಸುಮ್ಮನೆ ಕುಳಿತು ನೋಡುಗರ ಗಮನ ಬೇರೆಡೆ ಕದಲದಂತೆ ಇಡೀ ಗಮನವನ್ನು ಆ ವಕೀಲ ಪ್ರದರ್ಶಿಸುವ ಬುದ್ಧಿವಂತಿಕೆ ಮೇಲೆ ಕೇಂದ್ರೀಕೃತವಾಗಿರುವಂತೆ ಮಾಡಿರುವ ನಿರ್ದೇಶಕರ ಜಾಣತನ ಇಲ್ಲಿ ಗಮನಸೆಳೆಯುತ್ತದೆ. ಒಂದು ಕೊಲೆ ಹಿನ್ನೆಲೆಯಲ್ಲೇ ಶುರುವಾಗುವ ಚಿತ್ರ ಎಲ್ಲೂ ವಿನಾಕಾರಣ ಪ್ರಶ್ನೆಗಳಿಗೆ ಕಾರಣವಾಗುವುದಿಲ್ಲ.

ಎಲ್ಲೋ ಒಂದು ಕಡೆ ಕೊಲೆಯ ಮರು ತನಿಖೆ ಬೋರು ಹೊಡೆಸುತ್ತೆ ಎನ್ನುವ ಹೊತ್ತಿಗೆ, ಅಲ್ಲೊಂದು ಹೊಸ ಟ್ವಿಸ್ಟ್‌ ಕೊಟ್ಟು, ಪುನಃ ನೋಡುಗರ ಚೈತನ್ಯಕ್ಕೆ ನಿರ್ದೇಶಕರ ಬುದ್ಧಿಮಟ್ಟ ಕಾರಣವಾಗುತ್ತದೆ. ಒಂದು ಚಿತ್ರ ಮನರಂಜನೆಯಾಗಿರಬೇಕು, ಪಕ್ಕಾ ಹಾಸ್ಯಭರಿತವಾಗಿರಬೇಕು, ಸಂದೇಶ ಕೊಡುವಂತಿರಬೇಕು, ಇಲ್ಲಾ, ಕುತೂಹಲ ಮೂಲಕ ಎಲ್ಲಾ ಗೊಂದಲಕ್ಕೂ ಉತ್ತರ ಕೊಡುತ್ತಲೇ, ನೋಡಿಸಿಕೊಂಡು ಹೋಗುವಂತಿರಬೇಕು.

Advertisement

“ಬೀರ್‌ಬಲ್‌’ ಕುತೂಹಲದ ಜೊತೆ ಎಲ್ಲೂ ಗೊಂದಲವಿಲ್ಲದೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದಲ್ಲದೆ, ಅಲ್ಲಲ್ಲಿ ಚಿಟಿಕೆಯಷ್ಟು ಹಾಸ್ಯ, ಕಥೆಗೆ ಪೂರಕವೆನಿಸುವಷ್ಟು ಪ್ರೀತಿ, ಅಮ್ಮ, ಮಗನ ಬಾಂಧವ್ಯ, ಪೊಲೀಸ್‌ ಇಲಾಖೆಯೊಳಗಿರುವ ಹುಳುಕು ಇತ್ಯಾದಿಯನ್ನು ಎಷ್ಟು ಬೇಕೋ ಅಷ್ಟನ್ನು ತೋರಿಸುವ ಮೂಲಕ ಎಲ್ಲೂ ಪ್ರಶ್ನೆಗಳಿಗೆ ಎಡೆಮಾಡಿಕೊಡದೆ ವಕೀಲನ ಸಾಹಸ ಕಥೆಯನ್ನು ಬಿಡಿಸುತ್ತಾ ಹೋಗಿರುವುದು ಚಿತ್ರದ ಆಕರ್ಷಣೆ.

ಬರೀ ವಕೀಲನೊಬ್ಬನ ತನಿಖೆಯಲ್ಲೇ ಚಿತ್ರ ಸುತ್ತುತ್ತದೆ ಅಂದುಕೊಂಡವರಿಗೆ, ಇಲ್ಲಿ ಹಾಡುಂಟು, ಫೈಟೂ ಉಂಟು. ಹಾಗಂತ, ಅವೆಲ್ಲವನ್ನು ಬಲವಂತವಾಗಿ ತುರುಕಿಲ್ಲ ಎಂಬ ಮಾತು ಕೂಡ ಅಷ್ಟೇ ನಿಜ. ಮೊದಲೇ ಹೇಳಿದಂತೆ ಇಲ್ಲಿ, ಕಥೆ ಇದೆ, ಅದಕ್ಕೆ ತಕ್ಕ ಚಿತ್ರಕಥೆಯೂ ಇದೆ. ಕಾಣಿಸಿಕೊಂಡಿರುವ ಪಾತ್ರಗಳಿಂದ “ಬೀರ್‌ಬಲ್‌’ನ ಮೈಲೇಜ್‌ ಕೂಡ ಹೆಚ್ಚಿದೆ. ಇಂತಹ ಚಿತ್ರಗಳಿಗೆ ಸಂಭಾಷಣೆಯಾಗಲಿ, ಹಿನ್ನೆಲೆ ಸಂಗೀತವಾಗಲಿ ಪೂರಕವಾಗಿದ್ದರೆ ಮಾತ್ರ,

ಅದಕ್ಕೊಂದು ಅರ್ಥ. ಇಲ್ಲಿ ಅದ್ಯಾವುದೂ ಅಪಾರ್ಥವಾಗಿಲ್ಲ ಎಂಬುದೇ ಸಮಾಧಾನ. ತಾನು ಮಾಡದ ಕೊಲೆಗೆ ಆರೋಪಿ ಪಟ್ಟ ಹೊತ್ತು, ಪೆರೋಲ್‌ ಮೇಲೆ ಹೊರಬಂದ ಯುವಕನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಛಲ ತೊಡುವ ಯುವ ವಕೀಲ, ಸಾಕಷ್ಟು ವಿಷಯಗಳನ್ನು ಕಲೆಹಾಕಿ, ಆ ಕೊಲೆಯ ಹಿಂದಿನ ಕೈಗಳನ್ನು ಪತ್ತೆ ಹಚ್ಚುವುದೇ “ಬೀರ್‌ಬಲ್‌’ನ ಕಥೆ.

ಇಲ್ಲಿ ಕೊಲೆಯಾದವರ್ಯಾರು, ಆ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ, ಕೊನೆಗೆ ಆ ಕೊಲೆಯ ಆರೋಪಿ ಸಿಗುತ್ತಾನಾ, ನ್ಯಾಯಕ್ಕೆ ಜಯ ಸಿಗುತ್ತಾ ಇಲ್ಲವಾ ಅನ್ನುವ ಕುತೂಹಲವಿದ್ದರೆ, ಸಿನಿಮಾ ನೋಡಲಡ್ಡಿಯಿಲ್ಲ. ಶ್ರೀನಿ ಇಲ್ಲಿ ಯುವ ವಕೀಲನಾಗಿ ಇಷ್ಟವಾಗುತ್ತಾರೆ. ಪಾತ್ರದಲ್ಲಿ ವಿನಾಕಾರಣ ತುಂಟಾಟಗಳಿಲ್ಲ. ಗಂಭೀರ ನಟನೆ, ಮಾತುಗಳಿಂದ ಗಮನಸೆಳೆಯುತ್ತಾರೆ. ಸುರೇಶ್‌ ಹೆಬ್ಳೀಕರ್‌ ಪಾತ್ರದ ತೂಕ ಹೆಚ್ಚಿಸಿದ್ದಾರೆ.

ಸುಜಯ್‌ ಶಾಸ್ತ್ರಿ ಪಾತ್ರ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಎಂದಿನ ಶೈಲಿಯಲ್ಲಿ ಮಧುಸೂದನ್‌ ಆರ್ಭಟಿಸಿದ್ದಾರೆ. ಉಳಿದಂತೆ ರುಕ್ಮಿಣಿ, ಕೃಷ್ಣ, ರವಿಭಟ್‌ ಪಾತ್ರಗಳಿಗೆ ಮೋಸ ಮಾಡಿಲ್ಲ. ಸೈರಭ್‌ ವೈಭವ್‌ ಕಾಲಚರಣ್‌ ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿದೆ. ಪ್ರಸನ್ನ ಅವರ ಮಾತುಗಳು ಚಿತ್ರದ ಗಂಭೀರತೆಗೆ ಸಾಕ್ಷಿಯಾಗಿವೆ. ಭರತ್‌ ಪರಶುರಾಮ್‌ ಕ್ಯಾಮೆರಾದಲ್ಲಿ “ಬೀರ್‌ಬಲ್‌’ನ ಸೊಗಸಿದೆ.

ಚಿತ್ರ: ಬೀರ್‌ಬಲ್‌
ನಿರ್ಮಾಣ: ಟಿ.ಆರ್‌.ಚಂದ್ರಶೇಖರ್‌
ನಿರ್ದೇಶನ: ಶ್ರೀನಿ
ತಾರಾಗಣ: ಶ್ರೀನಿ, ರುಕ್ಮಿಣಿ ವಸಂತ್‌, ಸುರೇಶ್‌ ಹೆಬ್ಳೀಕರ್‌, ಸುಜಯ್‌ ಶಾಸ್ತ್ರಿ, ಮಧುಸೂದನ್‌, ರವಿಭಟ್‌, ಕೃಷ್ಣ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next