Advertisement

ಗ್ರಾಪಂ ದುರಾಡಳಿತಕ್ಕೆ ಆಕ್ರೋಶ

02:56 PM Nov 13, 2019 | |

ಔರಾದ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರು ಕ್ಷೇತ್ರವಾಗಿರುವ ತಾಲೂಕಿನ ಎಕಂಬಾ ಗ್ರಾಮ ಪಂಚಾಯತ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಬೀದಿಗಿಳಿದು ಪ್ರತಿಭಟಿಸಿದರು.

Advertisement

ತಾಲೂಕಿನ ಎಕಂಬಾ ಗ್ರಾಮ ಪಂಚಾಯತಿ ಜನಸಾಮಾನ್ಯರಿಗೆ ಸುವ್ಯವಸ್ಥಿತ ಆಡಳಿತ ನೀಡದ ಹಿನ್ನೆಲೆ ಮಹಿಳೆಯರು, ಯುವಕರು ಸೇರಿದಂತೆ ಸಂಘ-ಸಂಸ್ಥೆಯ ಪದಾಧಿಕಾರಿಗಳು ಔರಾದ-ಉದಗೀರ್‌ ರಸ್ತೆ ತಡೆದು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಭಂಡಾರ ಕುಮಟಾ, ಲಿಂಗಿ, ಡೊಂಗರಗಾಂವ, ದಾಪಕಾ, ಸಾವರಗಾಂವ, ಬಾದಲಗಾಂವ ಸೇರಿದಂತೆ ಹಲವು ಗ್ರಾಮದ ಜನರಿಗೆ ತಾಲೂಕು ಕೇಂದ್ರ ಔರಾದ್‌ಗೆ ತೆರಳಲು ಕೆಲ ಕಾಲ ಸಮಸ್ಯೆ ಎದುರಾಯಿತು.

ಈ ವೇಳೆ ಸಂಭಾಜಿ ಬ್ರಿಗೇಡ್‌ ಅಧ್ಯಕ್ಷ ಸತೀಶ ವಾಸರೆ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಪ್ರದೇಶಗಳ ಕೊಡುಗೆ ಹೆಚ್ಚಿನದಾಗಿದ್ದರೂ ಅವುಗಳು ಅಭಿವೃದ್ಧಿಯಿಂದ ವಂಚಿತವಾಗುತ್ತಿರುವುದು ದುರಾದೃಷ್ಟಕರ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆಂದು ಹತ್ತು ಹಲವು ಯೋಜನೆಗಳನ್ನು ರೂಪಿಸಿದರೂ ಸಂಬಂಧಿತ ಅಧಿಕಾರಿಗಳ, ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದ ಅನೇಕ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೆ ವಿಫಲವಾಗುತ್ತಿವೆ ಎಂದು ಆರೋಪಿಸಿದರು.

ಎಕಂಬಾ ಪಂಚಾಯತಿಯಲ್ಲಿಯೂ ಲಂಚ ಮತ್ತು ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ. ಸೂರಿಲ್ಲದೇ ಕೂಲಿ ನಾಲಿ ಕೆಲಸ ಮಾಡುವ ಬಡವರು, ನಿರ್ಗತಿಕರಿಗೆ ವಿವಿಧ ವಸತಿ ಯೋಜನೆಗಳಡಿ ಮನೆ ಕೊಡಿಸುವುದಾಗಿ ಹೇಳಿ ಅವರಿಂದ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಸೇರಿ 15ರಿಂದ 20 ಸಾವಿರ ವರೆಗೆ ಲಂಚ ಪಡೆದ ಅನೇಕ ನಿದರ್ಶನಗಳು ಕಾಣಸಿಗುತ್ತವೆ ಎಂದು ದೂರಿದರು.

ಅದಾಗ್ಯೂ ಇಲ್ಲಿವರೆಗೆ ಮನೆಯೂ ಇಲ್ಲ, ಹಣವು ಇಲ್ಲ. ಅಲ್ಲದೇ 14ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ ಅಂದಾಜು 40 ಲಕ್ಷ ರೂ. ಹಣ ಬಿಡುಗಡೆಯಾದರೂ ಯಾವುದೇ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡದೆ ಗ್ರಾಪಂ ಅಧ್ಯಕ್ಷರಾದಿಯಾಗಿ ಎಲ್ಲರೂ ಹಣವನ್ನು ಕೊಳ್ಳೆ ಹೊಡೆಯಲು ಯತ್ನಿಸುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಗ್ರಾಮಸಭೆಗಳನ್ನು ಮಾಡದೆ ಕೇವಲ ದಾಖಲೆಗೆ ಸೀಮಿತವೆಂಬಂತೆ ಕೆಲಸ ಮಾಡುತ್ತಿರುವುದು ಜನರ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ. ಜನರ ಅವಶ್ಯಕತೆಗಳ ಪರಿವೆಯೇ ಇಲ್ಲದಂತೆ ಆಡಳಿತ ನಡೆಸುತ್ತಿರುವ ಗ್ರಾಪಂ ಅವ್ಯವಸ್ಥೆ ಸರಿಪಡಿಸುವಂತೆ ಬ್ರಿಗೇಡ್‌ ಕಾರ್ಯಕರ್ತರು ಆಗ್ರಹಿಸಿದರು.

Advertisement

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಎಂ. ಚಂದ್ರಶೇಖರ್‌ ಮತ್ತು ತಾಪಂ ಇಒ ಶಿವಾನಂದ ಔರಾದೆ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ಎಕಂಬಾ ಗ್ರಾಮ ಪಂಚಾಯತ ಆಡಳಿತದ ವಿಚಾರವಾಗಿ ಕುಲಂಕಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಮುಖರಾದ ಅಂಕುಶ ವಾಡಿಕರ್‌, ಗೋವಿಂದ ಪಾಟೀಲ, ದತ್ತಾ ಪಾಟೀಲ, ಸಂತೋಷ ಬಿರಾದಾರ, ಅಮೀತ ಹಂಗರಗೆ, ಜ್ಞಾನೇಶ್ವರ ಪೋಲಕೆವಾರ್‌, ಭಗವಂತ ಘೋರವಾಡೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next