Advertisement

ಮೈನರ್‌ ಬಸಿಲಿಕಾ ಘೋಷಣೆಯಾಗಿ ನಾಳೆಗೆ ವರುಷದ ಹರುಷ

06:50 AM Jul 31, 2017 | |

ಕಾರ್ಕಳ: ಕರಾವಳಿಯ ಕ್ರೈಸ್ತರ ಪೂಜನೀಯ ಮತ್ತು ಪಾವನ ಕಾರಣಿಕ ಕ್ಷೇತ್ರ,ತಾಲೂಕಿನ ಪವಿತ್ರ ಕ್ಷೇತ್ರ ಕಾರ್ಕಳ ಅತ್ತೂರು ಸಂತ ಲಾರೆನ್ಸ್‌ ಚರ್ಚ್‌ ಕಿರಿಯ ಮಹಾದೇವಾಲಯ ಎಂದು ಘೋಷಣೆಗಾಗಿ ಆ.1 ಕ್ಕೆ ವರ್ಷ ತುಂಬುತ್ತಿದೆ. ಕಳೆದ ವರ್ಷ ಇದೇ ದಿನದಂದು ಅತ್ತೂರಿನ ಈ ರಮಣೀಯ ಚರ್ಚ್‌ನಲ್ಲಿ ಅದ್ದೂರಿ ಬಸಿಲಿಕಾ ಘೋಷಣಾ ಸಮಾರಂಭ ನಡೆದಿತ್ತು. ಲಕ್ಷಾಂತರ ಜನಸ್ತೋಮ ಈ  ಐತಿಹಾಸಿಕ ಉದ್ಘೋಷಣಾ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಪಾವನರಾಗಿದ್ದರು. ಆ ಮೂಲಕ ಪುಟ್ಟ ಊರು ಕಾರ್ಕಳ ವಿಶ್ವದ ಇತಿಹಾಸದ ಪುಟದಲ್ಲಿ ಎಲ್ಲರೂ ಗುರುತಿಸುವ ಸ್ಥಳವಾಯಿತು.

Advertisement

ನಂಬಿಕೆಯನ್ನು ಪೊರೆಯುವ ಕ್ಷೇತ್ರ
ಕರ್ನಾಟದ 2ನೇ ಮತ್ತು ದೇಶದ 22ನೇ ಹಾಗೂ ಜಗತ್ತಿನ 1742 ನೇ ಮೈನರ್‌ ಬಸಿಲಿಕಾ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರ ಇದೀಗ ವಿಶ್ವಮಾನ್ಯವಾಗಿ ಒಂದು ವರ್ಷದ ಘೋಷಣಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನಿಂತಿದೆ. ಒಂದು ವರ್ಷದ ಅವಧಿಯಲ್ಲಿ  ಸಾವಿರಾರು ಸಂಖ್ಯೆಯಲ್ಲಿ ವಿಶ್ವದ ಹಲವು ದೇಶಗಳ ಪ್ರವಾಸಿಗರು,ಭಕ್ತರು ಬಸಿಲಿಕಾ ಸ್ಥಾನಕ್ಕೇರಿದ ಈ ಭವ್ಯ ಚರ್ಚ್‌ ಅನ್ನು ಕಣ್ತುಂಬಿಕೊಂಡು ಸಂತೃಪ್ತರಾಗಿದ್ದಾರೆ.ಸುಮಾರು 3 ಶತಮಾನಗಳ ಇತಿಹಾಸವುಳ್ಳ ಈ ಕ್ಷೇತ್ರವು ಕರಾವಳಿ ಜನತೆಯನ್ನು ಮಾತ್ರವಲ್ಲ ವಿಶ್ವವನ್ನೇ ಇದೀಗ ತನ್ನತ್ತ ಕರೆಯುತ್ತಿದೆ.ಆ ಮೂಲಕ ಶಾಂತಿ,ಸೌಹಾರ್ದ, ಸಹಬಾಳ್ವೆ,ಸಮತೆ,ಏಕತೆಯ ಸಂಕೇತವಾಗಿ ನಿಂತಿದೆ ಅತ್ತೂರು ಬಸಿಲಿಕಾ.

ಅಭಿವೃದ್ಧಿಯತ್ತ ಬಸಿಲಿಕಾ
ಕಳೆದ ಒಂದು ವರ್ಷದ ಅವಧಿಯಲ್ಲಿ ಅತ್ತೂರು ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕೆಲಸಗಳಾಗಿವೆ.ರಸ್ತೆ ಅಭಿವೃದ್ಧಿ, ಚರ್ಚ್‌ನ ಸುತ್ತಲಿರುವ ಪ್ರಾಂಗಣಗಳ ಅಭಿವೃದ್ಧಿ,ಪಾರ್ಕಿಂಗ್‌ ಸ್ಥಳದ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿಗಳಾಗುತ್ತಿವೆ.ಇನ್ನೂ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು ಚರ್ಚ್‌ ಇನ್ನೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದೆ.

ಬಸಿಲಿಕಾ ಘೋಷಣೆ ಪತ್ರ
ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷರಾದ ರೈ|ರೆ|ಡಾ|ಜೆರಾಲ್ಡ್‌ ಐಸಾಕ್‌ ಲೋಬೋ ಅವರು ವಿವಿಧ ಧರ್ಮಗುರುಗಳು  ಮತ್ತು ಕ್ರೈಸ್ತ ವಿಶ್ವಾಸಿಗಳ ಪ್ರಾರ್ಥನೆ ಹಾಗೂ ಬಿನ್ನಹಗಳನ್ನು  ಉಲ್ಲೇಖೀಸಿ 2016 ಫೆ.4 ರಂದು ಬರೆದಿರುವ ಪತ್ರವನ್ನನುಸರಿಸಿ ದೇವಾರಾಧನೆ ಮತ್ತು ಸಂಸ್ಕಾರ ಶಿಸ್ತು ಪಾಲನಾ ಮಂಡಳಿ ತನಗೆ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರಿಂದ ದತ್ತವಾದ ವಿಶೇಷ ಅಧಿಕಾರದಿಂದ  ಕಾರ್ಕಳ ಪಟ್ಟಣ ಸಮೀಪದ ಅತ್ತೂರಿನಲ್ಲಿರುವ ರಕ್ತ ಸಾಕ್ಷಿ ಸಂತ ಲಾರೆನ್ಸರ  ಗೌರವಕ್ಕೆ ಸಮರ್ಪಿಸಿರುವ ಪವಿತ್ರ ದೇವಾಲಯವನ್ನು  ಮೈನರ್‌ ಬಸಿಲಿಕಾ ಎಂಬ ಅಭಿಧಾನ ಮತ್ತು ಘನತೆಯಿಂದ ಅಲಂಕರಿಸಲು ಒಲವು ವ್ಯಕ್ತಪಡಿಸುತ್ತಿದೆ 989 ನ.9ರಂದು ಹೊರಡಿಸಿರುವ “”ದೆ ತಿತುಲೊ ಬಸಿಲಿಚೆ ಮಿನೊರಿಸ್‌” ಆದೇಶದಲ್ಲಿ  ವಿಧಿಸಿರುವ  ನಿರ್ಬಂಧಗಳನ್ನು  ಹೊರತುಪಡಿಸಿ ಎಲ್ಲ ವಿಧಿ ಮತ್ತು ದಕ್ಷ ಆರಾಧನಾ ವಿಧಿಗಳ ಪರವಾನಿಗೆ ನೀಡಲಾಗಿದೆ. ಇದಕ್ಕೆ ಯಾವುದೇ ಅಡೆ ತಡೆಗಳು ಬರಕೂಡದು.

ಬಸಿಲಿಕಾ ಸ್ಥಾನಮಾನ ಘೋಷಣೆಯಾದ ಒಂದು ವರ್ಷದ ಈ ಅವಧಿಯಲ್ಲಿ ಚರ್ಚ್‌ಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಈ ಶುಭ ಸಂದರ್ಭವನ್ನು ಮತ್ತೂಮ್ಮೆ ನೆನಪಿಸಿಕೊಳ್ಳುವ ಸಲುವಾಗಿ ಆ. 1ರಿಂದ ಆ. 9ರ ವರೆಗೆ ಚರ್ಚ್‌ನಲ್ಲಿ ಬೆಳಗ್ಗೆ ವಿಶೇಷ ಪೂಜಾವಿಧಿಗಳು ನಡೆಯಲಿವೆ. ಕ್ರೈಸ್ತರು ಭಾಗವಹಿಸಿ  ಸಂತ ಲಾರೆನ್ಸರ ಭಕ್ತಿಗೆ ಪಾತ್ರರಾಗಲಿದ್ದಾರೆ.
-ವಂ| ಜಾರ್ಜ್‌ ಡಿ’ಸೋಜಾ,
ಅತ್ತೂರು ಬಸಿಲಿಕಾದ ರೆಕ್ಟರ್‌

Advertisement

– ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next