ಕಾರ್ಕಳ: ಕ್ರಿಸ್ತನ ಅನುಯಾಯಿಯಾಗಲು ತ್ಯಾಗ, ಸೇವಾಗುಣ ಇರಬೇಕು. ಬಡವರ ಸೇವೆ ಮಾಡಲು ಪ್ರತಿ ಕ್ಷಣವೂ ಸಿದ್ಧರಾಗಿರುವವರು, ಅವರ ಸೇವೆಯಲ್ಲಿಯೇ ಖುಷಿ ಕಾಣುವವರು ಕ್ರಿಸ್ತರ ಅನುಯಾಯಿಗಳಾಗಲು ಅರ್ಹರು ಎಂದು ಉಡುಪಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಗುರುವಾರ ನಡೆದ ಮಾರ್ಗದರ್ಶಿಯ ಹಬ್ಬದಲ್ಲಿ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು.
ಅತ್ತೂರು ಬಸಿಲಿಕಾ ನಿರ್ದೇಶಕ ಹಾಗೂ ಧರ್ಮಕೇಂದ್ರದ ಧರ್ಮಗುರುಗಳಾದ ವಂ| ಜಾರ್ಜ್ ಡಿ’ಸೋಜಾ, ಕಿರಿಯ ಧರ್ಮಗುರು ವಂ| ವಿಜಯ ಡಿ’ಸೋಜಾ ಹಾಗೂ ವಿವಿಧ ಚರ್ಚ್‌ಗಳ ಧರ್ಮಗುರುಗಳು ಭಾಗವಹಿಸಿದ್ದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ರಿಚರ್ಡ್ ಪಿಂಟೋ, ಚುನಾಯಿತ ಅಧ್ಯಕ್ಷ ಜೋನ್ ಡಿ’ಸಿಲ್ವ, ಕಾರ್ಯದರ್ಶಿ ಸಂತೋಷ್ ಡಿ’ಸಿಲ್ವ, ಆರ್ಥಿಕ ಸಮಿತಿಯ ವಲೇರಿಯನ್ ಪಾಯಸ್ ಮೊದಲಾದವರು ಉಪಸ್ಥಿತರಿದ್ದರು.
ಜನಸಾಗರ: ಅತ್ತೂರು ಬಸಿಲಿಕಾ ಮಹೋತ್ಸವ ಕೊನೆಯ ದಿನವಾದ ಗುರುವಾರ ಕ್ಷೇತ್ರಕ್ಕೆ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದರು. ಗುರುವಾರ ರಜಾ ದಿನವಾದ್ದರಿಂದ ಲಕ್ಷಾಂತರ ಜನ ಆಗಮಿಸಿ ಬಲಿಪೂಜೆ, ಪ್ರಾರ್ಥನೆ ಹಾಗೂ ಮೋಂಬತ್ತಿ ಸೇವೆ ಸಲ್ಲಿಸಿದರು. ಬಲಿಪೂಜೆಯ ವಿಶೇಷ ಪ್ರಾರ್ಥನೆಗಳ ಮೂಲಕ ಕೊನೆಯ ದಿನವೂ ಚರ್ಚ್
ನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತು. ಪೊಲೀಸ್ ಸಿಬಂದಿ ವಾಹನಗಳ ನಿಯಂತ್ರಣಕ್ಕೆ ಹರಸಾಹಸಪಟ್ಟರು.