ಮೈಸೂರು: ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸಿರುವ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಶಿಕ್ಷಕರು ಹಾಗೂ ಪೋಷಕರು, ಮಕ್ಕಳಲ್ಲಿ ಕುತೂಹಲದ ಜತೆಗೆ ಆಸಕ್ತಿ ಹುಟ್ಟಿಸಿದಾಗ ಅವರು ಈ ವಿಷಯಗಳೆಡೆಗೆ ಆಕರ್ಷಿತರಾಗುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ, ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ಹಾಗೂ ಚಂದನ ವಾಹಿನಿ ಸಹಯೋಗದಲ್ಲಿ ಸೋಮವಾರ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ವಿಜ್ಞಾನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಕಬ್ಬಿಣದ ಕಡಲೆಯಂತಾಗಿದೆ. ಈ ವಿಷಯಗಳ ಬಗ್ಗೆ ಅವರಿಗೆ ಕುತೂಹಲ ಉಂಟಾದರೆ ಇವು ಸುಲಿದ ಬಾಳೆ ಹಣ್ಣಿನಂತೆ ಸರಾಗವಾಗಲಿವೆ. ಮೈಸೂರು ವಿಶ್ವವಿದ್ಯಾನಿಲಯವು ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಸ್ನಾತಕೋತ್ತರ ಶಿಕ್ಷಣದ ಪ್ರಯೋಗಾಲಯ ಬಳಸಲು ಅವಕಾಶ ನೀಡಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಈ ಸೌಲಭ್ಯ ಸಿಗಬೇಕು. ಇದಕ್ಕೆ ಬೇಕಾದ ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದರು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಹೆಚ್ಚಿನವರು ಒಲವು ತೋರುತ್ತಿದ್ದಾರೆ. ಆದರೆ, ಮೂಲ ವಿಜ್ಞಾನದ ಶಿಕ್ಷಣ ಅಗತ್ಯವಿದ್ದು, ಈ ವಿಷಯದ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನ ಮತ್ತು ಗಣಿತ ಕಷ್ಟ ಎಂಬ ಭಾವನೆಯಿದ್ದು, ಅದನ್ನು ಹೋಗಲಾಡಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ. ಒಬ್ಬ ಶಿಕ್ಷಕ ಮಾತ್ರ ಮತ್ತೂಬ್ಬ ಶಿಕ್ಷಕನನ್ನು ಸೃಷ್ಟಿಸಲು ಸಾಧ್ಯವಿರುವುದರಿಂದ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಮತ್ತಷ್ಟು ತಿಳಿವಳಿಕೆ ಹೆಚ್ಚಿಸಬೇಕು ಎಂದರು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.
ಸಂಚಾರ ವಿಜ್ಞಾನ ಪ್ರಯೋಗಾಲಯ: ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಮೈಸೂರು ವಿವಿಯಲ್ಲಿರುವ ಒಂದೇ ಸಂಚಾರ ವಿಜ್ಞಾನ ಪ್ರಯೋಗಾಲಯದಿಂದ ಮೈಸೂರು, ಮಂಡ್ಯ, ಚಾಮರಾಜ ನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಸಂಚರಿಸಿ ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ. ಹೀಗಾಗಿ, ಒಂದೇ ವಾಹನ ಎಲ್ಲಾ ಕಡೆ ಹೋಗಲು ಕಷ್ಟವಾಗಿದ್ದು, ಶಿಕ್ಷಣ ಇಲಾಖೆಯಿಂದ ಇನ್ನೂ ಮೂರು ಸಂಚಾರಿ ವಿಜ್ಞಾನ ಪ್ರಯೋಗಾಲಯದ ವಾಹನ ನೀಡುವಂತೆ ಮನವಿ ಮಾಡಿದರು.