Advertisement

ಖಾಲಿ ಇರುವ ಕಾನ್ಸ್‌ಟೇಬಲ್ ಹುದ್ದೆ ಭರ್ತಿಗೆ ಗಮನ: ಆರಗ ಜ್ಞಾನೇಂದ್ರ

03:47 PM Oct 29, 2021 | Dinesh M |

ಸಾಗರ: ರಾಜ್ಯದಲ್ಲಿ ಗೃಹ ಇಲಾಖೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಕಾನ್ಸ್‌ಟೇಬಲ್ ಹುದ್ದೆಯನ್ನು ಭರ್ತಿಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಇಲ್ಲಿನ ಜೋಗ್ ಬಸ್ ನಿಲ್ದಾಣ ಸಮೀಪ ಶುಕ್ರವಾರ ನಗರ ಠಾಣೆಯನ್ನು ಸ್ಥಳಾಂತರಿಸುವ ಕುರಿತು ಪರಿಶೀಲನೆ ನಡೆಸಿ, ನಗರ ಠಾಣೆಯಲ್ಲಿ ಬೀಟ್ ಪುಸ್ತಕ ಪರಿಶೀಲನೆ ನಡೆಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪೊಲೀಸ್ ವ್ಯವಸ್ಥೆಯಲ್ಲಿ ಬೀಟ್ ಅತ್ಯಂತ ಪ್ರಮುಖಪಾತ್ರ ವಹಿಸುತ್ತಿದ್ದು, ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಹಿಂದೆ ವರ್ಷಕ್ಕೆ ನಾಲ್ಕೈದು ಠಾಣೆಗಳನ್ನು ನಿರ್ಮಿಸುತ್ತಿದ್ದರು. ಈ ಬಾರಿ ೨೦೦ ಕೋಟಿ ರೂ. ಇರಿಸಿಕೊಂಡು ರಾಜ್ಯದಾದ್ಯಂತ ೧೦೦ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ನಮ್ಮ ಪೊಲೀಸರು ಕೆಲಸ ಮಾಡುವ ಸ್ಥಳ ಅತ್ಯುತ್ತಮವಾಗಿರಬೇಕು. ಜೊತೆಗೆ ಅವರು ವಾಸ ಮಾಡುವ ಮನೆಗಳು ಚೆನ್ನಾಗಿರಬೇಕು.

ಇದನ್ನೂ ಓದಿ:- ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಕಂಟಕ; ಆರಗ ಭವಿಷ್ಯ

ಹಿಂದೆ ಸಿಂಗಲ್ ರೂಮ್ ಬೆಡ್ ರೂಮ್ ಇರುತ್ತಿತ್ತು. ಈಗ ಡಬ್ಬಲ್ ಬೆಡ್ ರೂಮ್ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಈಗಾಗಲೆ ೧೧ ಸಾವಿರ ಮನೆ ನಿರ್ಮಿಸಲಾಗಿದ್ದು, ೨೦೨೫ರೊಳಗೆ ಮತ್ತೆ ೧೦ಸಾವಿರ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರದ ಕಡೆಯಿಂದ ನಿರ್ವಹಿಸಲಾಗುತ್ತಿದೆ. ಪೊಲೀಸ್ ಇಲಾಖೆಗೆ ಇಷ್ಟೊಂದು ಹಣಕೊಟ್ಟ ಸರ್ಕಾರ ದೇಶದಲ್ಲಿಯೇ ನಮ್ಮ ರಾಜ್ಯ ಮೊದಲು ಎಂದರು.

Advertisement

ನಾಲ್ಕು ವರ್ಷದ ಹಿಂದೆ ರಾಜ್ಯದಲ್ಲಿ ೩೩ ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಖಾಲಿ ಇತ್ತು. ಈಗ ವರ್ಷಕ್ಕೆ ನಾಲ್ಕು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈಗ ಕೇವಲ ೧೨ ಸಾವಿರ ಹುದ್ದೆಗಳು ಮಾತ್ರ ಖಾಲಿ ಇದೆ. ಈ ವರ್ಷ ಎಲ್ಲ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕಾನ್ಸ್‌ಟೇಬಲ್‌ಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿರುವುದರಿಂದ ಸಮನ್ಸ್ ಜಾರಿಯನ್ನು ಮೊಬೈಲ್ ಮೂಲಕ, ಪೋಸ್ಟ್ ಮೂಲಕ ತಲುಪಿಸುವುದು ಇಲ್ಲವೆ ಖಾಸಗಿ ಏಜೆನ್ಸಿಗೆ ಸಮನ್ಸ್ ಜಾರಿ ಮಾಡುವ ಹೊಣೆಗಾರಿಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಜನ ಬಂದು ಪೊಲೀಸ್ ಠಾಣೆಗೆ ದೂರು ನೀಡುವುದನ್ನು ತಪ್ಪಿಸಲು ೧೧೨ ವಾಹನ ಬಿಡಲಾಗಿದೆ. ೧೧೨ಗೆ ಫೋನ್ ಮಾಡಿದರೆ ತಕ್ಷಣ ಪೊಲೀಸರು ನಗರವ್ಯಾಪ್ತಿಯಲ್ಲಿ ೧೦ರಿಂದ ೧೫ ನಿಮಿಷದಲ್ಲಿ, ಹಳ್ಳಿಗಳಿಗೆ ೨೦ರಿಂದ ೩೦ ನಿಮಿಷದಲ್ಲಿ ತಲುಪುತ್ತಿದ್ದು, ಈ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹೈವೆ ಪೆಟ್ರೋಲ್ ಸಹ ಸಂಚಾರ ನಿಯಂತ್ರಣದ ಬಗ್ಗೆ ಗಮನ ಹರಿಸುತ್ತಿದೆ.

ಜಿಲ್ಲೆಗೊಂದು ಮಹಿಳಾ ಠಾಣೆ ನಿರ್ಮಿಸಿದ್ದು, ತಾಲೂಕು ಕೇಂದ್ರದ ಠಾಣೆಯಲ್ಲೂ ಮಹಿಳೆಯರಿಂದ ದೂರು ಸ್ವೀಕರಿಸಲು ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಸೈಬರ್ ಠಾಣೆಯನ್ನು ಆಧುನಿಕರಣಗೊಳಿಸುವ, ಠಾಣೆಯಲ್ಲಿರುವವರಿಗೆ ಗುಜರಾತ್ ಸರ್ಕಾರದ ಜೊತೆ ಜಂಟಿಯಾಗಿ ಸೂಕ್ತ ತರಬೇತಿ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಬಿ.ಎಚ್.ಲಿಂಗರಾಜ್, ಗಣೇಶಪ್ರಸಾದ್, ನಗರಠಾಣೆ ವೃತ್ತ ನಿರೀಕ್ಷಕ ಅಶೋಕಕುಮಾರ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next