ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ (PU Exam) ಇದೀಗ ಮಹತ್ವದ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ 15 ನಿಮಿಷ ಕಡಿತ ಮಾಡಲಾಗಿದೆ.
ಹೊಸ ನಿಯಮ ಅನುಷ್ಠಾನದ ಬಗ್ಗೆ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಮೊದಲು ಮೂರು ಗಂಟೆಗಳ ಕಾಲ ನಡೆಯುತ್ತಿದ್ದ ಲಿಖಿತ ಪರೀಕ್ಷೆ ಇನ್ನು ಮುಂದೆ 2 ಗಂಟೆ 45 ನಿಮಿಷಗಳ ಕಾಲ ನಡೆಯಲಿದೆ.
ಇದೇ ಶೈಕ್ಷಣಿಕ ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹಿಂದೆ ಲಿಖಿತ ಪರೀಕ್ಷೆಗೆ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಉತ್ತರಿಸಲು ಪರೀಕ್ಷೆಯಲ್ಲಿ 3 ಗಂಟೆ ಕಾಲಾವಕಾಶ ನೀಡಲಾಗುತ್ತಿತ್ತು. ಈಗ ಗರಿಷ್ಠ 70/80 ಅಂಕಗಳ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು 2.45 ಗಂಟೆಯಲ್ಲಿ ಉತ್ತರ ಬರೆಯಬೇಕಾಗಿದೆ.
ಆದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಯಲ್ಲಿ ಮೂರು ಗಂಟೆ ಕಳೆಯಬೇಕಿದೆ. ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಉತ್ತರಿಸಲು 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
ಎನ್.ಎಸ್.ಕ್ಯು.ಎಫ್ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯಗಳಲ್ಲಿ 60/40 ಅಂಕಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅವಧಿಯನ್ನು ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗಿದೆ.