ಮಹಾಲಿಂಗಪುರ: ರನ್ನಬೆಳಗಲಿ ಶ್ರೀ ಗುರು ಮಹಾಲಿಂಗೇಶ್ವರ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮ ಮನರಂಜಿಸಿತು.
ಒಂದು ವಾರದಲ್ಲಿ ಹಮ್ಮಿಕೊಂಡ ವಿವಿಧ ಮೋಜಿನ ಆಟಗಳು ಕಾಲೇಜಿಗೆ ಮಾತ್ರ ಸೀಮಿತಗೊಂಡಿದ್ದವು. ಕೊನೆಯ ದಿನ ಹಳ್ಳಿಯ ಸೊಗಡು ಪಟ್ಟಣಕ್ಕೆ ವ್ಯಾಪಿಸಿತ್ತು. ಹಳ್ಳಿಯ ಗತಕಾಲದ ವೈಭವ ಮೆರೆದಿತ್ತು. ಅಲಂಕೃತಗೊಂಡ ಎತ್ತಿನ ಸವಾರಿ ಬಂಡಿ, ಕುದುರೆ ಸವಾರ ಹಳ್ಳಿಯ ವೇಷ ಭೂಷಣ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಶ್ರೀ ಗುರು ಮಹಾಲಿಂಗೇಶ್ವರ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ ಬಆಹಾರ, ತಿಂಡಿ ತಿನಿಸು ಪ್ರದರ್ಶನ ಮನ ತಣಿಸಿತು. ವಿದ್ಯಾರ್ಥಿಗಳು ಧೋತರ-ಪಟಕಾ, ವಿದ್ಯಾರ್ಥಿನಿಯರು ಇಳಕಲ್ಲ ರೇಷ್ಮೆ ಸೀರೆ, ಆಭರಣಗಳು ಸೇರಿದಂತೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದರು.
ಗ್ರಾಮಿಣ ಆಹಾರ ಮೇಳದಲ್ಲಿ ಕಾಶಿಬಾಯಿ ಪುರಾಣಿಕ, ಮಹಾದೇವಪ್ಪ ಮುರನಾಳ, ರೇಣುಕಾ ಪೂಜಾರಿ, ಆರ್.ಎಸ್. ಭಜಂತ್ರಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿ, ಹಳ್ಳಿಯ ಜೀವನ ಕ್ರಮಗಳು ಇಂದು ನಾಶವಾಗುತ್ತಿವೆ. ಇಂತಹ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮರೆಯಾದ ವೇಷಭೂಷಣ, ಆಹಾರದ ಕ್ರಮಗಳನ್ನು ಮತ್ತೆ ನೆನಪಿಸಿಕೊಟ್ಟರು. ಭವಿಷ್ಯದಲ್ಲಿಯೂ ಹಳ್ಳಿಯ ಜೀವನ ಕ್ರಮ ಉಳಿಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪಿ.ಎಚ್. ನಾಯಕ, ಉಪನ್ಯಾಸಕರಾದ ಗೋಪಾಲ ಟೋಣಪೆ, ಪಿ.ಬಿ. ಸೊಲ್ಲಾಪುರ, ಎಸ್.ಆಯ್.ಹಿಪ್ಪರಗಿ, ಜೆ.ಐ. ವಜ್ಜರಮಟ್ಟಿ, ವಿ.ಎಸ್. ಕಾಂಬಳೇಕರ, ಎಂ. ಭಜಂತ್ರಿ ಕಾರ್ಯಕ್ರಮದ ತಯಾರಿ ಮತ್ತು ಮಾರ್ಗದರ್ಶನ ನೀಡಿ ಯಶಸ್ವಿಗೆ ಶ್ರಮಿಸಿದರು.