Advertisement

ಶೌಚಗೃಹ ನಿರ್ಮಾಣ ವಿಳಂಬ ಖಂಡಿಸಿ ಸಭೆಯಲ್ಲೇ ಧರಣಿ

04:48 PM Feb 13, 2021 | Team Udayavani |

ರಾಯಚೂರು: ಅನುದಾನ ಬಿಡುಗಡೆಯಾಗಿ ನಾಲ್ಕು ವರ್ಷ ಕಳೆದರೂ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಿಸದ ಕಾಶ್ಯುಟೆಕ್‌ ಸೇರಿದಂತೆ ವಿವಿಧ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಿಬ್ಬರು ಜಿಪಂ ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ ಮಾಸಿಕ ಕೆಡಿಪಿ ಸಭೆಯಲ್ಲಿ ಆರಂಭದಲ್ಲೇ ಈ ಸಮಸ್ಯೆ ಪ್ರಸ್ತಾಪಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌. ಕೇಶವರೆಡ್ಡಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಜ್ಯೋತಿ ಶ್ರೀನಿವಾಸರೆಡ್ಡಿ ಕೆಳಗೆ ಕುಳಿತು ಪ್ರತಿಭಟಿಸಿದರು.

Advertisement

ಕಳೆದ ನಾಲ್ಕು ವರ್ಷದಿಂದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರೂ ನಿರ್ಮಿಸಿಲ್ಲ. ಜಿಲ್ಲೆಯಲ್ಲಿ ಕ್ಯಾಶುಟೆಕ್‌ಗೆ 345, ನಿರ್ಮಿತಿ ಕೇಂದ್ರದವರು 368 ಶೌಚಗೃಹ ನಿರ್ಮಿಸಿದ್ದು, 642 ಕಾಮಗಾರಿ ಬಾಕಿಯಿವೆ. ಹಣ ಬಿಡುಗಡೆಯಾಗಿ ನಾಲ್ಕು ವರ್ಷವಾಗಿದೆ. ಹೀಗಾಗಿ ಏಜೆನ್ಸಿಯಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಅಧ್ಯಕ್ಷೆ ಆದಿಮನಿ ವೀರಲಕ್ಷ್ಲೀ, ಸಂಬಂಧಿಸಿದ ಅ ಧಿಕಾರಿಯನ್ನು ವಿಚಾರಿಸಿ ತರಾಟೆಗೆ ತೆಗೆದುಕೊಂಡರು. ಸಿಇಒ ಶೇಖ್‌ ತನ್ವಿರ್‌ ಆಸೀಫ್‌ ಮಾತನಾಡಿ, ನಾನು ಅಧಿ ಕಾರ ವಹಿಸಿಕೊಂಡು ಕೆಲವೆ ದಿನಗಳಾಗಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸುತ್ತೇವೆ ಎಂದರು. ಅಲ್ಲಿಗೂ ಸದಸ್ಯರು
ಮೇಲೆಳಲಿಲ್ಲ. ಕೊನೆಗೆ ಅಧ್ಯಕ್ಷೆ, ಸಿಇಒ ಕೆಳಗಿಳಿದು ಬಂದು ಇಬ್ಬರು ಸದಸ್ಯರ ಮನವೊಲಿಸಿದರು. ಅಧ್ಯಕ್ಷೆ ಮಾತನಾಡಿ, ಬೇಸಿಗೆ ಸಮೀಪಿಸಿದ್ದು, ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ವಹಿಸಬೇಕು. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಶೀಘ್ರ ಸರಿಪಡಿಸಬೇಕು. ಅಗತ್ಯವಿರುವೆಡೆ ಕೊಳವೆಬಾವಿ ಕೊರೆಸಿ ನೀರು ಪೂರೈಸಬೇಕು ಎಂದರು.

ಸಿಇಒ ಮಾತನಾಡಿ, ಸಾಕಷ್ಟು ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು, ವಾರದೊಳಗೆ ವರದಿ ಅದರ ವಸ್ತುಸ್ಥಿತಿ ಆಧರಿತ ವರದಿ ಕೊಡಿ ಎಂದರು. ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಕೋವಿಡ್‌ ನಂತರ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಒತ್ತು ನೀಡಬೇಕು. ಮಕ್ಕಳಿಗೆ ವಸತಿ ನಿಲಯಗಳಲ್ಲಿ ಮೆನು ಪ್ರಕಾರ ಗುಣಮಟ್ಟದ ಊಟ, ಉಪಾಹಾರ ನೀಡಬೇಕು. ಶಿಥಿಲಗೊಂಡ ವಿದ್ಯಾರ್ಥಿ ನಿಲಯಗಳ ಪಟ್ಟಿ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್‌ಗೆ ಅಧ್ಯಕ್ಷೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದು, ಕಳೆದ ಮೂರ್‍ನಾಲ್ಕು ದಿನಗಳಿಂದ ಶೂನ್ಯ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದೆ. 2ನೇ ಹಂತದ ಕೋವಿಶೀಲ್ಡ್‌ ವಿತರಣೆ ಸರಿಯಾಗಿ ನಡೆಯುತ್ತಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

ಗೈರಾದ ಅಧಿಕಾರಿಗಳಿಗೆ ನೋಟಿಸ್‌
ಸಭೆಗೆ ಸಾಕಷ್ಟು ಅಧಿಕಾರಿಗಳು ಗೈರಾಗಿದ್ದು, ಕಾರಣ ಕೇಳಿ ನೋಟಿಸ್‌ ನೀಡಬೇಕು. ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧ್ಯಕ್ಷೆ ಆದಿಮನಿ ವೀರಲಕ್ಷಿ ಸೂಚಿಸಿದರು. ಕಳೆದ ಕೆಡಿಪಿ ಸಭೆಯಲ್ಲಿ ಆರು ಅಧಿ ಕಾರಿಗಳಿಗೆ ನೋಟಿಸ್‌ ನೀಡಿರುವ ಪೈಕಿ ನಾಲ್ವರು ಅಧಿಕಾರಿಗಳು ಈಗಾಗಲೇ ನೋಟಿಸ್‌ಗೆ ಉತ್ತರಿಸಿದ್ದಾರೆಂದು ಮುಖ್ಯ ಯೋಜನಾಧಿಕಾರಿ ಡಾ| ರೋಣಿ ಮಾಹಿತಿ ನೀಡಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ದೇವದುರ್ಗ, ಸಿಂಧನೂರಿನ ಎಇಇಗಳು ಉತ್ತರ ನೀಡಿಲ್ಲ. ಅವರಿಗೆ ಮತ್ತೂಮ್ಮೆ ನೋಟಿಸ್‌ ಕೊಡಿ ಎಂದು ಅಧ್ಯಕ್ಷೆ ಸೂಚಿಸಿದರು.

ಸಮಿತಿ ರಚಿಸಿ ತನಿಖೆ
ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಜ್ಯೋತಿ ಮಾತನಾಡಿ, ಹೊಸಪೇಟೆ ಗ್ರಾಮದಲ್ಲಿ ಕುವೆಂಪು ವಸತಿ ಶಾಲೆ 2005ರಲ್ಲಿ ನಿರ್ಮಿಸಿದ್ದು, 2015ರಲ್ಲೇ ಕುಸಿದು ಬಿದ್ದಿದೆ. ಕೂಡಲೇ ನಿರ್ಮಿತಿ ಕೇಂದ್ರದ ಅ ಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು. ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಮಾತನಾಡಿ, ಈ ಕುರಿತು 15 ದಿನದೊಳಗೆ ತನಿಖೆ ನಡೆಸಿ, ವರದಿ ಸಲ್ಲಿಸಬೇಕು. 10 ವರ್ಷದಲ್ಲಿ ಕಟ್ಟಡ ಕುಸಿದಿದೆ ಎಂದರೆ ಅದರ ಗುಣಮಟ್ಟದ ಸಮಗ್ರ ತನಿಖೆ ನಡೆಸಿ. ಈ ಬಗ್ಗೆ ಕುಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ವರದಿ ನೀಡುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next