ಪಾಂಡವಪುರ: ಜ.31, ಫೆ.1ರಂದು ತಾಲೂಕಿನ ಮೇಲುಕೋಟೆಯಲ್ಲಿ ನಡೆಯಲಿರುವ 17ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಶಾಸಕ ಸಿ.ಎಸ್.ಪುಟ್ಟರಾಜು ಶುಕ್ರವಾರ ಸಂಜೆ ಅಧಿಕಾರಿಗಳು, ಸಾಹಿತ್ಯಾಸಕ್ತರ ಸಭೆ ನಡೆಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಮ್ಮೇಳನ ಮೊದಲ ದಿನದ ಶ್ರೀಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, 2ನೇ ದಿನ ಸುತ್ತೂರು ಕ್ಷೇತ್ರದ ಶ್ರೀಶಿವರಾತ್ರೀಶ್ವರ ದೇಶೀ ಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನುಬಳಿಗಾರ್ ಉದ್ಘಾಟನೆ ಉದ್ಘಾಟಿಸಲಿದ್ದಾರೆಂದರು.
ಅದ್ಧೂರಿ ಮೆರವಣಿಗೆ: ಸಮ್ಮೇಳನದ ಮೊದಲ ದಿನ ಸರ್ವಾಧ್ಯಕ್ಷ ಡಾ.ನರಹಳ್ಳಿ ಸುಬ್ರಹ್ಮಣ್ಯ ಅವರನ್ನು ತಾಲೂಕಿನ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾತಂಡ ಕಡ್ಡಾಯವಾಗಿ ಭಾಗವಹಿಸಿ ಮೆರವಣಿಗೆಯಲ್ಲಿ ತರಬೇಕು. ಅಂದು ಬೆಳಗ್ಗೆ 9.30ಕ್ಕೆ ಮೇಲುಕೋಟೆ ಶ್ರೀಚಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಳ್ಳುವುದು. ಶಿಕ್ಷಕರು ಪಾಲ್ಗೊಳ್ಳುವಂತೆ ಕ್ರಮವಹಿಸಲು ಬಿಇಒ ಎನ್. ಎ.ಮಲ್ಲೇಶ್ವರಿ ಅವರಿಗೆ, ವೈದ್ಯಕೀಯ ಸೌಲಭ್ಯ ಮಾಡುವಂತೆ ಟಿಎಚ್‌ಒ ಡಾ.ಸಿ.ಎ.ಅರವಿಂದ್‌ರಿಗೆ ಸೂಚಿಸಿದರು.
ಬೃಹತ್ ವೇದಿಕೆ:ಮೇಲುಕೋಟೆ ಆಸ್ಪತ್ರೆ ಮುಂಭಾಗದ ಮೈದಾನದಲ್ಲಿ ಸಮ್ಮೇಳದ ಬೃಹತ್ ವೇದಿಕೆ ನಿರ್ಮಿಸಲಾಗುವುದು, ಸುಮಾರು 3 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗುವುದು. ಆದಿಚುಂಚನ ಗಿರಿ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪಾಂಡವಪುರ ಪಟ್ಟಣದಿಂದ ಪ್ರತಿ ಅರ್ಧಗಂಟೆಗೊಮ್ಮೆ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜಿಲ್ಲಾದ್ಯಂತ ಸಾರ್ವಜನಿಕರು, ಸಾಹಿತ್ಯಾಶಕ್ತರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ತಿಮ್ಮೇಗೌಡ, ಎಚ್. ತ್ಯಾಗರಾಜು, ತಹಶೀಲ್ದಾರ್ ಡಾ.ಕಾಂ ತರಾಜ್, ಇಒ ಆರ್. ಪಿ.ಮಹೇಶ್, ಕಸಾಪ ಅಧ್ಯಕ್ಷ ವೆಂಕಟರಾಮೇಗೌಡ, ಡಾ. ಮಾಯಿಗೌಡ, ಕೆ.ವಿ. ಬಸವರಾಜು, ಡಾ.ಎಂ.ಬಿ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಗಂಗಾಧರ್, ಮಾಜಿ ಅಧ್ಯಕ್ಷ ನಾರಾಯಣಭಟ್ ಇದ್ದರು.