ಬಾಗಲಕೋಟೆ: ಜಿಲ್ಲಾ ಪಂಚಾಯಿತಿಯ ಪ್ರತಿ ತ್ತೈಮಾಜಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ತಮ್ಮ ತಮ್ಮ ಇಲಾಖೆಯ ಸಮಗ್ರ ಮಾಹಿತಿಯೊಂದಿಗೆ ಹಾಜರಾಗುವಂತೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ನೂತನ ಸಭಾಭವನದಲ್ಲಿ ಗುರುವಾರ ಜರುಗಿದ ಜಿಲ್ಲಾ ಪಂಚಾಯಿತಿಯ 4ನೇ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ನಮೂನೆಯಲ್ಲಿರುವ ಮಾಹಿತಿಯನ್ನು ತರದೇ ಸರಕಾರ ಪ್ರತಿಯೊಂದು ಯೋಜನೆಗಳು ಸಮರ್ಪಕ ಅನುಷ್ಠಾನಗೊಂಡ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಯಾವುದೇ ಮಾಹಿತಿ ಕೇಳಿದರೆ ತಕ್ಷಣ ಉತ್ತರ ನೀಡುವಂತಾಗಬೇಕು. ಆಗ ಮಾತ್ರ ಸಭೆಗೂ ಮತ್ತು ನಮಗೂ ಬೆಲೆ ಬರುತ್ತದೆ ಎಂದು ತಿಳಿಸಿದರು.
ನಂತರ ವಿವಿಧ ಇಲಾಖೆಯಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಾಕಷ್ಟು ಹಣ ಮಂಜೂರು ಮಾಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಬಳಕೆ ಪ್ರತಿಯೊಂದು ರೈತ ಕುಟುಂಬಕ್ಕೆ ಪ್ರಯೋಜನವಾಗಬೇಕು. ಕಳಪೆ ಬೀಜ ಮಾರಾಟಗಾರರು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನಿನ ಕ್ರಮ ಜರುಗಿಸಲು ಸೂಚಿಸಿದರು.
ತಾಲೂಕಿನ ತುಳಸಿಗೇರಿಯಲ್ಲಿರುವ ಬಹುಕೊಠಡಿಗಳುಳ್ಳ ಹಳೆಯ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಿ ಬಳಕೆಯಾಗುವಂತೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರಿ ತಿಳಿಸಿದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಯಾವುದೇ ಸೂಕ್ತವಾಗುತ್ತದೆ ಆ ಕಾರ್ಯಕ್ಕೆ ಕಟ್ಟಡವನ್ನು ಬಳಸಲು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ವಿಕಲಚೇತನರ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು ಆರೋಪಿಸಿದ ಹಿನ್ನೆಲೆಯಲ್ಲಿ ಈ ಎರಡು ಇಲಾಖೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಯವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳಿಗೆ ಸೂಚಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಡಾ|ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಹನಮಂತ ನಿರಾಣಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಯುಕೆಪಿ ಜನರಲ್ ಮ್ಯಾನೇಜರ್ ಲೋಕಂಡೆ, ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪ ಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ ಉಪಸ್ಥಿತರಿದ್ದರು.