ಉಡುಪಿ: ಜಿಲ್ಲೆಯ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ವಿಶೇಷವಾಗಿ ಹೆಚ್ಚಿನ ಅನುದಾನ ತರಲಾಗಿದ್ದು, ರೂಫಿಂಗ್, ಒಳಾಂಗಣ ಕ್ರೀಡಾಂಗಣಕ್ಕೆ ಎಸಿ ಅಳವಡಿಕೆ, ಮಹಿಳಾ ಕ್ರೀಡಾ ಅಕಾಡೆಮಿಗೆ ತಲಾ 1 ಕೋ. ರೂ. ಸುಸಜ್ಜಿತ ಜಿಮ್, ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಯ್ ಸೆಂಟರ್ ಆರಂಭಿಸಲು ತಲಾ 2 ಕೋ. ರೂ. ಕ್ರೀಡಾ ಅಕಾಡೆಮಿಗೆ 1. 5 ಕೋ.ರೂ.ಯನ್ನು ಕ್ರೀಡಾ ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು, ಉಡುಪಿಯನ್ನು ಕ್ರೀಡಾ ರಾಜಧಾನಿಯನ್ನಾಗಿಸಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕೊರಗ ಸಮುದಾಯದ ಯುವಕ- ಯುವತಿಯರಿಗಾಗಿ ಶುಕ್ರವಾರ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಗರು ಸಹ ಸಮಾಜದ ಎಲ್ಲ ಸಮುದಾಯದಂತೆ ಮುನ್ನಡೆಯಲು ಕ್ರೀಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಕೊರಗರ ಸಮಾಜದವರು ತಮ್ಮಲ್ಲಿರುವ ನ್ಯೂನತೆಗಳನ್ನು ಮೆಟ್ಟಿನಿಂತು ಇತರರೊಂದಿಗೆ ಸ್ಪರ್ಧಿಸಿ ಮುಂಚೂಣಿಗೆ ಬರು ವಂತಾಗಲು ಇಂತಹ ಕ್ರೀಡಾಕೂಟ ಸಹಕಾರಿ. ಕ್ರೀಡೆಯಲ್ಲಿ ಸಾಧನೆ ಮಾಡಲು ವಿಶೇಷ ತರಬೇತಿ ನೀಡಲಾಗುವುದು ಎಂದರು.
ಕೊರಗ ಸಮುದಾಯದ ಮುಖಂಡ ಗಣೇಶ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕ್ರೀಡಾಕೂಟದೊಂದಿಗೆ ಕೊರಗರ ಸಂಸ್ಕೃತಿ, ಆಚಾರ- ವಿಚಾರವನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಡೆಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಅಥ್ಲೆàಟಿಕ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶೇಖರ್ ಮರವಂತೆ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ನೇಜಾರಿನಲ್ಲಿ ಅಂತಾರಾಷ್ಟ್ರೀಯ ಈಜುಕೊಳ
ನೇಜಾರಿನಲ್ಲಿ 50×25 ಸುತ್ತಳತೆಯ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ನಿರ್ಮಿಸಲು ಯೋಜನೆ ಸಿದ್ಧವಾಗಿದ್ದು, 8 ಕೋ. ರೂ. ಅನುದಾನಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದಿಲ್ಲಿಯಲ್ಲಿರುವಂತಹ ಉತ್ತಮ ಗುಣಮಟ್ಟದ ಲಾನ್ ಟೆನಿಸ್ ಒಳಾಂಗಣ ಕ್ರೀಡಾಂಗಣವನ್ನು ಉಡುಪಿಯಲ್ಲಿ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿದ್ದು, ಆಸ್ಕರ್ ಫೆರ್ನಾಂಡಿಸ್ ಕೋಟಾದಿಂದ 1 ಕೋ. ರೂ., ಅಭಯಚಂದ್ರ ಜೈನ್ ಕ್ರೀಡಾ ಸಚಿವರಿದ್ದಾಗ 1 ಕೋ. ರೂ., ಈಗ 1.5 ಕೋ. ರೂ. ಕಾಯ್ದಿರಿಸಲಾಗಿದೆ ಎಂದು ಸಚಿವರು ಹೇಳಿದರು.