Advertisement

ಹತ್ತೂರುಗಳಿಗೆ ಪ್ರೇರಣೆಯಾದ ಕೆಲವರ ಪ್ರಯತ್ನ

01:20 AM Feb 07, 2020 | Sriram |

ಗ್ರಾಮೀಣ ಅಭಿವೃದ್ಧಿಯಲ್ಲಿ ಹೈನುಗಾರಿಕೆಯದ್ದು ಮಹತ್ತರ ಪಾತ್ರ. ಸ್ಥಳೀಯರಲ್ಲಿ ಈ ಉದ್ಯಮ ಪ್ರಜ್ಞೆ ಮೂಡಿಸಿ ಬೆಳೆಸುವಲ್ಲಿ ಶ್ರಮಿಸಿದ ಸಂಸ್ಥೆಗಳೆಂದರೆ ಹಾಲು ಉತ್ಪಾದಕರ ಸಂಘಗಳು. ಸ್ಥಳೀಯ ಆರ್ಥಿಕತೆಗೂ ಚೇತನ ತುಂಬಿದ ಹೆಗ್ಗಳಿಕೆ ಈ ಸಂಘಟನಾ ಪ್ರಯತ್ನಕ್ಕೆ ಸಲ್ಲಬೇಕು. ಈ ಯಶೋಗಾಥೆಯ ದಾಖಲೀಕರಣವೇ ಕ್ಷೀರ ಕಥನ. ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಘಗಳ ಅಭಿವೃದ್ಧಿ ಕಥನವಿದು.

Advertisement

ಗ್ರಾಮಾಭಿವೃದ್ಧಿಯ ಕನಸಿನೊಂದಿಗೆ ಉದಯಿಸಿದ ಸಂಸ್ಥೆ ಅಲ್ಲಿಗೇ ನಿಲ್ಲಲಿಲ್ಲ ; ಹತ್ತೂರುಗಳಿಗೆ ಹೈನುಗಾರಿಕೆ ಪಾಠ ಕಲಿಸಿತು. ಇನ್ನೂ ವಿಶೇಷವೆಂದರೆ ಗ್ರಾಮೀಣ ಭಾಗಕ್ಕೆ ಗುಜರಾತ್‌ನ ಜಾನುವಾರು ತಳಿಗಳನ್ನು ತಂದು ಪ್ರಯೋಗ ನಡೆಸಿದ ಹೆಗ್ಗಳಿಕೆಯೂ ಈ ಸಂಸ್ಥೆಯದ್ದು.

ಕೋಟ: ಮಂದಾರ್ತಿ ಸಮೀಪದ ಮಾನ್ಯ ಹಾಲು ಉತ್ಪಾದಕರ ಸಂಘ ಬಹಳ ಹಳೆಯದು.1975 ರಲ್ಲಿ ಕೆನರಾ ಮಿಲ್ಕ್ ಯೂನಿಯನ್‌ ಆರಂಭವಾದ ಹೊತ್ತಿನಲ್ಲೇ ಆರಂಭವಾದ ಸಂಘವಿದು. 1975 ಮೇ 27ರಂದು ಗಣೇಶ್‌ ಪ್ರಸಾದ್‌ ಹಾಲು ಉತ್ಪಾದಕರ ಸಂಘ ಬನ್ನೇರಳ ಕಟ್ಟೆ ಎಂಬ ಹೆಸರಿನೊಂದಿಗೆ ಸ್ಥಾಪನೆಯಾಯಿತು. ಊರಿನ ಮುಖಂಡರಾದ ದಿ| ಬಿಲ್ಲಾಡಿ ದೊಡ್ಮನೆ ನಂದ್ಯಪ್ಪ ಶೆಟ್ಟಿಯವರ ಅಭಿವೃದ್ಧಿ ಪರ ನಿಲುವು ಇದರ ಸ್ಥಾಪನೆಗೆ ಕಾರಣ ವಾಯಿತು. ಗ್ರಾಮೀಣರ ಸ್ವಾವಲಂಬನೆ ಇದರ ಪರಿಕಲ್ಪನೆಯ ಹಿಂದಿನ ಉದ್ದೇಶ. ಹಾಗಾಗಿ ನಂದ್ಯಪ್ಪ ಶೆಟ್ಟಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಸಂಘದ ನೋಂದಣಿ ಇನ್ನಿತರ ಖರ್ಚುವೆಚ್ಚಗಳನ್ನು ನಿಭಾಯಿಸಿ ತಮ್ಮದೇ ಸ್ವಂತ ಕಟ್ಟಡದಲ್ಲಿ ಸಂಘ ಸ್ಥಾಪಿಸಿದರು. ಸ್ಥಳೀಯರಾದ ವಿಟuಲ ಮಾಸ್ಟರ್‌ ಮುಂತಾದವರು ಇವರ ಜತೆ ಕೈಜೋಡಿಸಿದರು. ಈ ಉತ್ಸಾಹಿ ತಂಡಕ್ಕೆ ಮಾರ್ಗದರ್ಶನ ನೀಡು ತ್ತಿದ್ದವರು ದಿ| ಕೆ.ಎಂ. ಉಡುಪರು.

ಆರಂಭದಲ್ಲಿ 60 ಮಂದಿ ಸದಸ್ಯರು. ದಿನಕ್ಕೆ ಸುಮಾರು 50 ಲೀಟರ್‌ ಹಾಲು ಸಂಗ್ರಹ ವಾಗುತ್ತಿತ್ತು. ಕ್ರಮೇಣ ಜನರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆ ಹೆಚ್ಚಿ ಸಂಸ್ಥೆಯು ಬೆಳವಣಿಗೆಗೊಂಡು 1984ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.

ಕೆನರಾ ಮಿಲ್ಕ್ ಯೂನಿಯನ್‌ನ ಸ್ಥಾಪಕ ರಾದ ಡಾ| ದಿ. ಟಿ.ಎ. ಪೈಯವರು ಅಂದು ನೇರವಾಗಿ ಹಳ್ಳಿ-ಹಳ್ಳಿಗೆ ಸಂಚರಿಸಿ ಹೈನುಗಾರರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಅದೇ ರೀತಿ ಮಾನ್ಯ ಹಾಲು ಉತ್ಪಾದಕರ ಸಂಸ್ಥೆ ಆರಂಭವಾದಾಗಲೂ ಈ ಊರಿಗೆ ಬಂದು ಒಂದು ದಿನ ವಾಸ್ತವ್ಯವಿದ್ದು ಮನೆ- ಮನೆಗೆ ತೆರಳಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಿದ್ದರು. ಇವರ ಭೇಟಿ ಯಿಂದ ಹುಮ್ಮಸ್ಸುಗೊಂಡ ರೈತರು ಜಾನುವಾರು ಸಾಕಣೆಗೆ ತೊಡಗಿದರು.

Advertisement

ಅನ್ಯ ತಳಿಯ ಪರಿಚಯ
ಡೈರಿ ಆರಂಭವಾದ ಸಂದರ್ಭ ಗ್ರಾಮದ ಎಲ್ಲ ಮನೆಗಳಲ್ಲಿ ಕೇವಲ ಊರಿನ ಸ್ಥಳೀಯ ತಳಿಯ ಹಸುಗಳಿದ್ದವು. ಹೀಗಾಗಿ ಇವುಗಳಿಂದ ಹೆಚ್ಚಿನ ಹಾಲು ಸಂಗ್ರಹಿಸಲಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಹಾಲು ಕೊಡುವ ಅನ್ಯ ತಳಿಯ ಹಸುಗಳತ್ತ ಮನ ಮಾಡಿದರು ನಂದ್ಯಪ್ಪ ಶೆಟ್ಟಿಯವರು. ಗುಜರಾತ್‌ಗೆ ತೆರಳಿ ಅಲ್ಲಿನ ಅನ್ಯ ತಳಿಯ ಹಸುಗಳನ್ನು ಕಂಡು ಈ ಊರಿಗೂ ತಂದರು. ಇಲ್ಲಿನವರಿಗೆ ಅದೇ ಹೊಸತು. ಜತೆಗೆ ಜಾನುವಾರು ಕೊಳ್ಳಲು ಒಂದೇ ದಿನದಲ್ಲಿ ಸಿಂಡಿ ಕೇಟ್‌ ಬ್ಯಾಂಕ್‌ ಮೂಲಕ ಸಾಲ ನೀಡುವ ವ್ಯವಸ್ಥೆಯನ್ನು ಟಿ.ಎ. ಪೈ ಜಾರಿ ತಂದಿದ್ದರು.

ಸುತ್ತ ಹತ್ತೂರಿಗೆ ಉತ್ತೇಜನ
ಕೋಟ ಹೋಬಳಿಯ ಗ್ರಾಮಾಂತರ ಭಾಗದ 2ನೇ ಸಂಸ್ಥೆಯಾಗಿ ಸ್ಥಾಪನೆಯಾದ ಈ ಸಂಘ ಕೆಲವೇ ವರ್ಷ ಗಳಲ್ಲಿ ವೇಗವಾಗಿ ಬೆಳೆದು ನೂರಾರು ಹೈನುಗಾರರನ್ನು ಸೃಷ್ಟಿಸಿ ಸ್ವಾವಲಂಬನೆಯ ರಥವನ್ನು ಏರಿಸಿತು. ಸಂಸ್ಥೆಯ ಬೆಳವಣಿಗೆ ಕಂಡ ಹತ್ತೂರ ಜನರಿಗೆ ಅಚ್ಚರಿ ಎನಿಸಿತು. ಎಲ್ಲರೂ ಈ ಸಂಸ್ಥೆಯಿಂದ ಹೈನುಗಾರಿಕೆಯ ಪಾಠ ಕಲಿಯತೊಡಗಿದರು. ತಮ್ಮೂರಿನಲ್ಲೂ ಇಂಥ ಸಂಘಗಳ ಸ್ಥಾಪನೆಗೆ ಮುಂದಾದರು.

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ ಸಂಸ್ಥೆಯಲ್ಲಿ 291 ಮಂದಿ ಸದಸ್ಯರಿದ್ದು, 1200 ಲೀಟರ್‌ಗಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. 350ಕ್ಕೂ ಹೆಚ್ಚು ಮಂದಿ ವ್ಯಾವಹಾರಿಕ ಉದ್ದೇಶದಿಂದ ಹೈನು
ಗಾರಿಕೆ ನಡೆಸುತ್ತಿದ್ದು, ಒಂದು ಸಾವಿರಕ್ಕೂ ಮಿಕ್ಕಿ ಜಾನುವಾರುಗಳಿವೆೆ. ಬಿ. ಪ್ರವೀಣ್‌ ಕುಮಾರ್‌ ಶೆಟ್ಟಿ ಅಧ್ಯಕ್ಷರಾಗಿ, ಸುರೇಶ್‌ ಮರಕಾಲ ಕಾರ್ಯದರ್ಶಿಯಾಗಿ, ಸುಜಿತ್‌ ಕೊಠಾರಿ, ಶಾಲಿನಿ, ಪ್ರಭಾವತಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾನುವಾರು ಕಟ್ಟೆಯಲ್ಲಿ ಸಂಘದ ಉಪಕೇಂದ್ರವೊಂದು ಕಾರ್ಯನಿರ್ವಹಿಸುತ್ತಿದೆ.ಸಂಸ್ಥೆಯು ಸ್ಥಳೀಯ ಆರ್ಥಿಕತೆಯ ಉತ್ತೇಜನಕ್ಕೆ ಮತ್ತು ಸಾಮಾಜಿಕ ಅಭಿವೃದ್ಧಿಗೂ ತೊಡಗಿಕೊಂಡಿತು. ಅದರ ಭಾಗವಾಗಿ ಹಲವು ದಶಕಗಳ ಬೇಡಿಕೆಯಾದ ಪಡಿತರ ವಿತರಣಾ ಕೇಂದ್ರವನ್ನು ತನ್ನ ಕಟ್ಟಡದಲ್ಲೇ ಆರಂಭಿಸಿತು. ಪ್ರತಿ ವರ್ಷ ವಾರ್ಷಿಕೋತ್ಸವ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿರುವುದು ವಿಶೇಷ.

ಕೆಮುಲ್‌ ಕಥನ
ಅವಿಭಜಿತ ದ.ಕ. ಜಿಲ್ಲೆಯ ಗ್ರಾಮೀಣ ಸಣ್ಣಹಿಡುವಳಿದಾರ ರೈತರಿಗೆ ಅರ್ಥಿಕ ಶಕ್ತಿ ತುಂಬಲು ಆರಂಭವಾದದ್ದು ಕೆನರಾ ಮಿಲ್ಕ್ ಯೂನಿಯನ್‌ (ಕೆಮುಲ್‌). ದಿ| ಡಾ| ಟಿ. ಎ. ಪೈ ಅವರು 1974ರ ಮೇ 25 ರಂದು ಈ ಹಾಲು ಒಕ್ಕೂಟವನ್ನು ಸ್ಥಾಪಿಸಿದರು. ಇದು ಗುಜರಾತ್‌ನ ಅಮುಲ್‌ ಮಾದರಿಯಲ್ಲಿತ್ತು. ಎರಡು ಜಿಲ್ಲಾದ್ಯಂತ ಡಾ| ವರ್ಗೀಸ್‌ ಕುರಿಯನ್‌ ಅವರ ಸಹಕಾರದಿಂದ ಹಲವಾರು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಹಾಲಿನ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆ ಪ್ರಾರಂಭಿಸಿ, ಮಣಿಪಾಲದಲ್ಲಿ ಹಾಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದರು. ಈ ಮೂಲಕ ಕೇವಲ ದೇಶಿಯ ಜಾನುವಾರುಗಳ ಸಾಕಣೆಯೊಂದಿಗೆ ಗೃಹ ಬಳಕೆಗೆ ಮೀಸಲಾಗಿದ್ದ ಹೈನುಗಾರಿಕೆಗೆ ಉದ್ಯಮದ ಸ್ಪರ್ಶ ನೀಡಲಾಗಿತ್ತು.

ಹೀಗೆ ಕೆ.ಕೆ. ಪೈ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆದ ಕೆನರಾ ಮಿಲ್ಕ್ ಯೂನಿಯನ್‌ 1985ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ವಿಲೀನಗೊಂಡಿತು. 1986ರ ಮೇ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವಾಗಿ ಮಾರ್ಪಾಡುಗೊಂಡು, ಕರ್ನಾಟಕ ಹಾಲು ಮಂಡಳಿಯೊಡನೆ ಸಂಯೋಜನೆಗೊಂಡಿತು.

ಪ್ರಶಸ್ತಿ
ಅವಿಭಜಿತ ದ.ಕ. ಜಿಲ್ಲಾ ಮಟ್ಟದಲ್ಲಿ ಉತ್ತಮ ಸಂಘ ಪ್ರಶಸ್ತಿ ಸಂಘಕ್ಕೆ ದೊರೆತಿದೆ. ಇಲ್ಲಿನ ಸದಸ್ಯರಾದ ವಿಖ್ಯಾತ್‌ ಶೆಟ್ಟಿ ಮಿನಿ ಡೈರಿ ಹೊಂದಿದ್ದು ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಪ್ರತೀಶ್‌ ಶೆಟ್ಟಿ ಹಸುರು ಮೇವು ಉತ್ಪಾದನೆಯಲ್ಲಿ ಒಕ್ಕೂಟದ ಮಟ್ಟದಲ್ಲಿ ಬಹುಮಾನ ಪಡೆದಿರುವ ಪ್ರಗತಿಪರರು.

ಈ ಸಂಸ್ಥೆಯು ಸಣ್ಣಹಿಡುವಳಿದಾರ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಹುಟ್ಟಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಹಾಗೂ ಸುತ್ತಲಿನ ಹಲವು ಸಂಸ್ಥೆಗಳಿಗೆ ಪ್ರೇರಣೆ ಮಾರ್ಗದರ್ಶಕವಾಗಿದೆ. ಅನೇಕ ಅಭಿವೃದ್ಧಿ ಯೋಜನೆಗಳು ನಮ್ಮ ಮುಂದಿವೆೆ.
-ಬಿ. ಪ್ರವೀಣ್‌ ಕುಮಾರ್‌ ಶೆಟ್ಟಿ , ಅಧ್ಯಕ್ಷರು

ಅಧ್ಯಕ್ಷರು
ನಂದ್ಯಪ್ಪ ಶೆಟ್ಟಿ, ಸಕಾರಾಮ ಶೆಟ್ಟಿ, ರವಿರಾಜ್‌ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಶರತ್‌ ಕುಮಾರ್‌ ಹೆಗ್ಡೆ, ವಿಟuಲ ಮಾಸ್ಟರ್‌, ಬಿ. ಪ್ರವೀಣ್‌ ಕುಮಾರ್‌ ಶೆಟ್ಟಿ.
ಕಾರ್ಯದರ್ಶಿಗಳು
ಉಮಾನಾಥ ಶೆಟ್ಟಿ ಬಾರಾಳಿ, ಮೋಹನ್‌ ಶೆಟ್ಟಿ ಬಿಲ್ಲಾಡಿ ಉಮಾನಾಥ ಶೆಟ್ಟಿ, ರವಿರಾಜ್‌ ಕಾಮತ್‌, ಸುಧಾಕರ ಕೊಠಾರಿ, ಸುರೇಶ್‌ ಮರಕಾಲ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next