Advertisement
ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 332ರ ಶೌಚಾಲಯದಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಆನೂರು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರಾಗಿರುವ ಆರ್.ರೇವಣ್ಣ ಕುಮಾರ್ (48) ಆತ್ಮಹತ್ಯೆಗೆ ಯತ್ನಿಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಇದರಿಂದ ಬೇಸತ್ತ ಅವರು, ಸಮೀಪದಲ್ಲೇ ಇರುವ ಶೌಚಾಲಯಕ್ಕೆ ಹೋಗಿ, ಕೈ ಮತ್ತು ಕುತ್ತಿಗೆಯನ್ನು ಬ್ಲೇಡ್‌ನಿಂದ ಕೊಯ್ದುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಶೌಚಾಲಯಕ್ಕೆ ಹೋದ ಸಿಬ್ಬಂದಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇವಣ್ಣರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳೀಯರ ನೆರವು ಪಡೆದು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಪ್ರಾಣಾಪಾಯವಿಲ್ಲ ಎಂದು ದೃಢಪಡಿಸಿರುವುದಾಗಿ ಪೊಲೀಸರು ಹೇಳಿದರು.
ಆತ್ಮಹತ್ಯೆಯಲ್ಲ “ಬಲಿದಾನ’!: ಗ್ರಂಥಾಲಯ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಲೆಟರ್‌ಹೆಡ್‌ನಲ್ಲೇ ಡೆತ್‌ನೋಟ್ ಬರೆದಿರುವ ರೇವಣ್ಣ, “ನನ್ನ ಸಾವಿಗೆ ನನ್ನ ಬಳಿ ದಾಖಲೆ ಇದೆ. ಸರ್ಕಾರ ಮೋಸ ಮಾಡಿರುವುದಕ್ಕೆ ಸಾಕ್ಷಿ ಇದೆ. ಇದು ಆರು ಸಾವಿರ ಕುಟುಂಬಗಳ ಬದುಕಿನ ಪ್ರಶ್ನೆ. ನನ್ನ ಸಾವಿಗೆ ಸರ್ಕಾರವೇ ಕಾರಣ. ಏಕೆಂದರೆ ಮೂರು ವರ್ಷಗಳಿಂದ ಕನಿಷ್ಠ ವೇತನ ಜಾರಿ ಮಾಡದೆ ನಮ್ಮ ಬದುಕನ್ನು ಬೀದಿಪಾಲು ಮಾಡಿದೆ.
ನಮ್ಮ ಕಷ್ಟಗಳನ್ನು ರಾಜ್ಯಪಾಲ, ರಾಷ್ಟ್ರಪತಿಗಳು, ಸಿಎಂ, ಪಿಎಂ, ಪ್ರಧಾನಕಾರ್ಯದರ್ಶಿ, ಇಲಾಖೆ ನಿರ್ದೇಶಕರು, ಯಾರಿಗೇ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ನಮ್ಮಂತಹ ಬಡವರಿಗೆ ಸಾವು ಕೊನೆ (ವರದಾನ) ಅಸ್ತ್ರ ಎಂದು ತಿಳಿದಿರುತ್ತೇನೆ. ಮಾನ್ಯ ಮುಖ್ಯಮಂತ್ರಿಗಳೇ, ದಯವಿಟ್ಟು ಕನಿಷ್ಠ ವೇತನ ಜಾರಿ ಮಾಡಿ ಆರು ಸಾವಿರ ಕುಟುಂಬಗಳನ್ನು ರಕ್ಷಿಸಿ’.
“ಇದು ಕೇವಲ ಆತ್ಮಹತ್ಯೆ ಅಲ್ಲ; ಬಲಿದಾನ. 25 ವರ್ಷಗಳ ಹೋರಾಟದ ಕೊನೆಯ ಹಂತ. ನನ್ನ ಅಂತ್ಯ ಸಂಸ್ಕಾರ ಮುಖ್ಯಮಂತ್ರಿಗಳಿಂದಲೇ ಆಗಬೇಕು. ನನ್ನ ಸಾವಿನ ನಂತರ ಮನೆಯಲ್ಲಿ ಫೋಟೋ ಹಾಕಬಾರದು, ಯಾರೂ ಅಳಬಾರದು. ಯಾವುದೇ ವಿಧಿ ವಿಧಾನ ಬೇಡ. ಹೂವು ಬಳಸಬಾರದು, ಸೀಮೆಎಣ್ಣೆ, ಒಂದು ಬೆಂಕಿಪಟ್ಟಣ, ಸ್ವಲ್ಪ ಕಟ್ಟಿಗೆ ಬಳಸಿ ಅಂತ್ಯ ಸಂಸ್ಕಾರ ಮುಗಿಸಬೇಕು’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್, ಮಧ್ಯಾಹ್ನ 1.30ಕ್ಕೆ ರೇವಣ್ಣ ಕೈ ಮತ್ತು ಕುತ್ತಿಗೆ ಕೊಯ್ದುಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಲ್ಲಿ ಆಧಾರ್‌ಕಾರ್ಡ್, ಗುರುತಿನ ಚೀಟಿ, ಆರು ಸಾವಿರ ಮಂದಿಗೆ ಕನಿಷ್ಠ ವೇತನ ನಿಗದಿ ಮಾಡುವ ಬಗ್ಗೆ ಮನವಿ ಪತ್ರ ಮತ್ತು ಉದ್ಯೋಗ ನೇಮಕಾತಿ ಕುರಿತ ಪತ್ರ ಸಿಕ್ಕಿದೆ. ಯಾವುದೇ ಆಯುಧ ಪತ್ತೆಯಾಗಿಲ್ಲ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ರೇವಣ್ಣ ಕುಮಾರ್‌ಗೆ ಪತ್ನಿ ಸುನಿತಾ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಸುನಿತಾ ಅವರಿಗೆ ಕಿವಿ ಕೇಳುವುದಿಲ್ಲ. ಇಬ್ಬರು ಗಂಡು ಮಕ್ಕಳು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ನಗರದಲ್ಲಿ ವಾಸವಾಗಿರುವ ಸುನಿತಾ ಅವರ ಸಹೋದರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಆಸ್ಪತ್ರೆಗೆ ಇಲಾಖೆ ನಿರ್ದೇಶಕರ ಭೇಟಿ: ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಹೊಸ್ಮನಿ ಸೋಮವಾರ ಸಂಜೆ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಆತ್ಮಹತ್ಯೆಗೆ ಯತ್ನಿಸಿದ ಗ್ರಂಥಾಲಯ ಮೇಲ್ವಿಚಾರಕ ರೇವಣ್ಣ ಕುಮಾರ್‌ರ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೇವಣ್ಣ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತದೆ. ಅವರಿಗೆ ಏಳು ಸಾವಿರ ರೂ. ಗೌರವ ಧನ ಕೊಡಲಾಗುತ್ತಿದೆ. ಮೂರು ತಿಂಗಳಿಂದ ವೇತನ ತಡವಾಗುತ್ತಿದೆ. ಕೆಲಸ ಖಾಯಂಗೊಳಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದರು.
ಇದೇ ವೇಳೆ ಗ್ರಂಥಾಲಯ ಸಿಬ್ಬಂದಿ ಪರ ಹೋರಾಟಗಾರ್ತಿ ಚಂಪಾ ಪ್ರಕಾಶ್ ಕೂಡ ಆಸ್ಪತ್ರೆ ಭೇಟಿ ನೀಡಿ, ರೇವಣ್ಣ ಅವರ ಆರೋಗ್ಯ ವಿಚಾರಿಸಿದರು. “ಈ ಹಿಂದೆ ಬಹಳಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಎಲ್ಲ ಸಿಬ್ಬಂದಿ ನೊಂದಿದ್ದಾರೆ. ಈ ಘಟನೆಗೆ ಗ್ರಂಥಾಲಯ ಇಲಾಖೆ ನಿರ್ದೇಶಕರು, ಸರ್ಕಾರವೇ ಹೊಣೆ,’ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡದ ಕಾರಣ ರೇವಣ್ಣ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೇವಣ್ಣ ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಗುತ್ತಿಗೆ ನೌಕರರಿಗೆ 13,200 ರೂ. ಕನಿಷ್ಠ ವೇತನ ನೀಡಬೇಕು.-ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ