Advertisement

ತಾಲೂಕು ಕಚೇರಿಗೆ ಜಾಗ ಗುರುತಿಸಿದ್ರೆ ಮಂಜೂರಾತಿ ಯತ್ನ

12:41 PM Jul 12, 2017 | |

ಹುಬ್ಬಳ್ಳಿ: ರಾಜ್ಯ ಸರ್ಕಾರವು ಹುಬ್ಬಳ್ಳಿ ತಾಲೂಕನ್ನು ಹುಬ್ಬಳ್ಳಿ ಶಹರ ತಾಲೂಕು ಹಾಗೂ ಗ್ರಾಮೀಣ ತಾಲೂಕೆಂದು ವಿಂಗಡಿಸಿದೆ. ಹೊಸ ತಾಲೂಕು ಕಚೇರಿಗಾಗಿ ಸೂಕ್ತ ಜಾಗ ಗುರುತಿಸಿದರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಾಗ ಕೊಡಿಸಲು ಯತ್ನಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. 

Advertisement

ಇಲ್ಲಿನ ಆದರ್ಶ ನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಕಂದಾಯ ಇಲಾಖೆ ಹುಬ್ಬಳ್ಳಿ ನಗರ ಹೊಸ ತಾಲೂಕು ರಚನೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಿರಗುಪ್ಪಿ ಮತ್ತು ಛಬ್ಬಿ ಹೋಬಳಿಯವರಿಗೆ ಅನುಕೂಲವಾಗುವ ಜಾಗದಲ್ಲಿ ಕಚೇರಿ ಆರಂಭಿಸಬೇಕು.

ಸರ್ಕಾರಿ ಜಾಗಗಳನ್ನು ಗುರುತಿಸಿ ಸೂಕ್ತ ಜಾಗದಲ್ಲಿ ಕಚೇರಿ ನಿರ್ಮಾಣವಾಗುವಂತಾಗಬೇಕು ಎಂದರು.  ಪ್ರಸ್ತುತ ನಗರದಲ್ಲಿರುವ ಮಿನಿ ವಿಧಾನಸೌಧದಲ್ಲಿ ಇನ್ನೊಂದು ತಹಶೀಲ್ದಾರ ಕಚೇರಿ ಮಾಡಲು ಸಾಧ್ಯವಿಲ್ಲ. ಅದು ತೀರಾ ಇಕ್ಕಟ್ಟಾಗಿದೆ. ಗದಗ, ಕೊಪ್ಪಳ ನಗರಗಳ ಮಿನಿ ವಿಧಾನಸೌಧಕ್ಕೆ ಹೋಲಿಸಿದರೆ ಇದು ತೀರಾ ಚಿಕ್ಕದಾಗಿದೆ.

ನಗರದ ಕೋರ್ಟ್‌ ನೂತನ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿರುವುದರಿಂದ ಆ ಜಾಗ ದೊರೆತರೆ ಬೃಹತ್‌ ಕಟ್ಟಡ ನಿರ್ಮಿಸಿ ಎರಡೂ ತಹಶೀಲ್ದಾರ ಕಚೇರಿಗಳನ್ನು ಅಲ್ಲಿ ಮಾಡಬಹುದು ಎಂದು ಹೇಳಿದರು. ಹುಬ್ಬಳ್ಳಿ ತಾಲೂಕನ್ನು ಉತ್ತರ ಹಾಗೂ ದಕ್ಷಿಣ ಎಂದು ವಿಭಜಿಸುವ ಕುರಿತು ಕೂಡ ಚಿಂತನೆ ನಡೆದಿದೆ.

ಆದರೆ ಇನ್ನು ಯಾವುದನ್ನೂ ನಿರ್ಧರಿಸಿಲ್ಲ. ಗ್ರಾಮೀಣ ಭಾಗವನ್ನು ಹಾಗೂ ನಗರ ಭಾಗವನ್ನು ಪ್ರತ್ಯೇಕಿಸುವುದು ಉತ್ತಮ ಸಲಹೆಯಾಗಿದೆ ಎಂದರು. ಮಾಜಿ ಮಹಾಪೌರ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಪ್ರತ್ಯೇಕಿಸುವುದರಿಂದ ಜನರ ಬೇಡಿಕೆಗೆ ಸ್ಪಂದಿಸಲು ಅನುಕೂಲವಾಗುತ್ತದೆ. 

Advertisement

ಕೆಲವು ವಾರ್ಡ್‌ಗಳಲ್ಲಿ ಗ್ರಾಮಗಳಿವೆ. ಅವುಗಳನ್ನು ಪ್ರತ್ಯೇಕಿಸಬೇಕು. ಹುಬ್ಬಳ್ಳಿ ಶಹರ ಪ್ರತ್ಯೇಕ ತಾಲೂಕು ಮಾಡಿದ್ದು ಸ್ವಾಗತಾರ್ಹ. ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಸಿಬ್ಬಂದಿ ಸಂಖ್ಯೆ ಹೆಚ್ಚುವುದರಿಂದ ಜನರಿಗೆ ಅನುಕೂಲವಾಗುವುದು ಎಂದರು. 

ಹುಬ್ಬಳ್ಳಿ ಶಹರ ತಾಲೂಕಿಗೆ 25 ಗ್ರಾಮಗಳು: ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಮಾತನಾಡಿ, ಇದು ಪ್ರಸ್ತಾವನೆಯಾಗಿದೆ. ಸರಕಾರಿ ಅಧಿಸೂಚನೆ ನಂತರ ಇದಕ್ಕೆ ರಾಜ್ಯ ಸರ್ಕಾರದ ಅಂಕಿತ ಸಿಗಬೇಕಿದೆ. ಪ್ರಸ್ತಾವನೆಯಲ್ಲಿ ಹುಬ್ಬಳ್ಳಿ ಶಹರ ತಾಲೂಕಿನ ವ್ಯಾಪ್ತಿಗೆ 25 ಗ್ರಾಮಗಳನ್ನು ಸೇರಿಸಲಾಗಿದೆ. 

ಹಳೆಯ ತಾಲೂಕಿನಲ್ಲಿ 48 ಗ್ರಾಮಗಳು ಇರಲಿವೆ. ಪ್ರಸ್ತಾವನೆ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಹ ಸೇರಿಸಿ ಕಳಿಸಲಾಗುವುದು ಎಂದು ಹೇಳಿದರು. ಹುಬ್ಬಳ್ಳಿ ತಾಲೂಕಿನಲ್ಲಿ ಹುಬ್ಬಳ್ಳಿ ಅಲ್ಲದೆ ಛಬ್ಬಿ, ಶಿರಗುಪ್ಪಿ ಹೋಬಳಿಗಳಿವೆ. ಯಾವುದೇ ಹೋಬಳಿಯ ವ್ಯಾಪ್ತಿಯನ್ನು ಬದಲಾವಣೆ ಮಾಡದೇ ತಾಲೂಕು ರಚನೆ ಮಾಡಲು ಸೂಚಿಸಲಾಗಿದೆ.

ಎರಡೂ ತಾಲೂಕುಗಳ ಕೇಂದ್ರಗಳು ಹುಬ್ಬಳ್ಳಿಯಲ್ಲಿಯೇ ಇರುವುದರಿಂದ ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಸಭೆಯಲ್ಲಿ ಪಾಲಿಕೆ ಸದಸ್ಯರಾದ ಪ್ರಫ‌ುಲ್‌ಚಂದ್ರ ರಾಯನಗೌಡರ, ದಶರಥ ವಾಲಿ, ಮಲ್ಲಿಕಾರ್ಜುನ ಹೊರಕೇರಿ ಇದ್ದರು. ತಹಶೀಲ್ದಾರ ಶಶಿಧರ ಮಾಡ್ಯಾಳ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next