Advertisement

ಭ್ರಷ್ಟಾಚಾರ ತಗ್ಗಿಸಲು ಯತ್ನ: ಲೋಕಾಯುಕ್ತ ನ್ಯಾ|ವಿಶ್ವನಾಥ ಶೆಟ್ಟಿ

03:17 PM Mar 17, 2017 | |

ಕಲಬುರಗಿ: ರಾಜ್ಯದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದಲ್ಲೇ ಕರ್ನಾಟಕ ರಾಜ್ಯವನ್ನು ಕಡಿಮೆ ಭ್ರಷ್ಟಾಚಾರ ಹೊಂದಿದ ರಾಜ್ಯವನ್ನಾಗಿ ಮಾರ್ಪಡಿಸಲು ಹಾಗೂ ಭ್ರಷ್ಟಾಚಾರವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಕರ್ನಾಟಕ ಲೋಕಾಯುಕ್ತವು ಆದ್ಯತೆ ಮೇರೆಗೆ ಪ್ರಯತ್ನಿಸಲಿದೆ ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ  ತಿಳಿಸಿದರು. 

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡುಬಡವರ, ಹಿಂದುಳಿದವರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಲುಪಿಸಬೇಕು.  ಯಾವುದೇ ಕಾರಣಕ್ಕೂ ತೊಂದರೆ ನೀಡಬಾರದು ಎಂದು ಎಚ್ಚರಿಸಿದರು. 

ರಾಜ್ಯದಲ್ಲಿ ಪಾರದರ್ಶಕ ಆಡಳಿತ ನೀಡಬೇಕೆನ್ನುವ ಉದ್ದೇಶದಿಂದ ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅಧಿಕಾರಿಗಳಿಗೆ ಅವರ ಕರ್ತವ್ಯ ಮತ್ತುಜವಾಬ್ದಾರಿ ಬಗ್ಗೆ ಮನವರಿಕೆ ಮಾಡುವುದರೊಂದಿಗೆ ಮನ ಪರಿವರ್ತಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಖಂಡಿತ.

ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಲೋಕಾಯುಕ್ತರಾಗಿ ಕೆಲಸ ನಿರ್ವಹಿಸಬೇಕಲ್ಲದೇ ಜನರ ಒಳತಿಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು. ಅಧಿಕಾರಿಗಳು ಸಾಮಾನ್ಯ ಜನರ ಕೆಲಸ ಮಾಡಲು ದುಡ್ಡು ಕೇಳಿದಾಗ ಜನರಿಗೆ ದುಡ್ಡು ನೀಡಲು  ತೊಂದರೆಯಾಗುವುದು. ಆ ಸಂದರ್ಭದಲ್ಲಿ ಲೋಕಾಯುಕ್ತರ ಮೊರೆ ಹೋಗುವರು. 

ಅಧಿಕಾರಿಗಳು ಹಣ ಪಡೆಯುವಾಗ ಸಿಕ್ಕಿ  ಬಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತಪ್ಪಿದ್ದಲ್ಲ. ಲಂಚಗುಳಿತನ ಅಕ್ಷಮ್ಯ ಅಪರಾಧ. ಇದಕ್ಕೆ ಅಧಿಕಾರಿಗಳು ಆಸ್ಪದ ನೀಡದೇ ಸಮಾಜದ ಬೆಳವಣಿಗೆಯಲ್ಲಿ ತೊಡಗಬೇಕು. ಅಧಿಕಾರಿಗಳು ಮಾಡುವ ಸಣ್ಣ ತಪ್ಪು ಸಹ ಅವರ ಮುಂದಿನ ಏಳ್ಗೆಗೆ ತೊಂದರೆಯಾಗುವುದು ಎಂದರು. 

Advertisement

ಉಪ ನೋಂದಣಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಭೂಮಾಪನ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕವೇ ದೈನಂದಿನ ಕೆಲಸ ಕಾರ್ಯಗಳು ನಡೆಯತ್ತವೆ ಎಂಬ ದೂರುಗಳು ಹೆಚ್ಚಾಗಿ ದಾಖಲಾಗುತ್ತಿವೆ. ಇದಕ್ಕಾಗಿ ಸಾರ್ವಜನಿಕರು ಲೋಕಾಯುಕ್ತಕ್ಕೆ ಸಲ್ಲಿಸುವ ಮೂಕ ಅರ್ಜಿಗೂ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಹೇಳಿದರು. 

ಇಲಾಖೆಗಳ ಅಧಿಕಾರಿಗಳು ತಮ್ಮ ಅಧಿಧೀನದ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ದೈನಂದಿನ ಕೆಲಸ ಕಾರ್ಯಗಳನ್ನು ಮಧ್ಯವರ್ತಿಗಳ ಮೂಲಕ ಮಾಡದಿರುವಂತೆ ಎಚ್ಚರಿಕೆ ನೀಡಬೇಕು. ಇದು  ತಪ್ಪದಿದ್ದಲ್ಲಿ ಲೋಕಾಯುಕ್ತರಿಗೆ ಸಾರ್ವಜನಿಕರಿಂದ ದಾಖಲಾಗುವ ದೂರುಗಳ ಆಧಾರದ ಮೇಲೆ ಆಯಾ ಕಚೇರಿಗಳ ತನಿಖೆ ಕೈಗೊಳ್ಳಲಾಗುವುದು. 

ಆರ್‌.ಟಿ.ಒ. ಕಚೇರಿಗಳಿಂದ ಎಲ್ಲ ವಾಹನಗಳ ವಾಯು ಮಾಲಿನ್ಯ ತಪಾಸಣೆ ಕಾರ್ಯವನ್ನು ನಿರಂತರ ಹಾಗೂ ಕಡ್ಡಾಯವಾಗಿ ಕೈಗೊಳ್ಳಬೇಕು. ಈ ಕಚೇರಿಗಳಿಂದ ವಾಹನ ಚಾಲನಾ ಪರವಾನಗಿ ಒದಗಿಸುವುದು ಮಹತ್ವದ್ದಾಗಿದೆ. ಇದರಲ್ಲಿ ಬೇಜಬ್ದಾರಿ, ಅಜಾಗರೂಕತೆ ವಹಿಸದೇ ವೈದ್ಯರು ರೋಗಿಯ ಶಸ್ತ್ರ ಚಿಕಿತ್ಸೆ ಮಾಡುವಾಗ ವಹಿಸುವ ಜಾಗೃತಿಯಷ್ಟೇ ವಾಹನ ಚಾಲನಾ ಪರವಾನಗಿ ನೀಡುವಾಗ ಜಾಗೃತಿ ವಹಿಸಬೇಕು.

ಈ ಕುರಿತು ದೂರುಗಳು ದಾಖಲಾಗುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳಿಂದ ನಡೆಸಲಾಗುತ್ತಿರುವ ವಸತಿನಿಲಯಗಳಲ್ಲಿ ವಾಸಿಸುವ ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಬೇಕು.

ಶುಚಿತ್ವದ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ, ಗ್ರಂಥಾಲಯ ಮುಂತಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಅಧಿಕಾರಿಗಳು ಪ್ರತಿವಾರ ಒಂದು ವಸತಿನಿಲಯಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಊಟೋಪಹಾರ ಮಾಡಬೇಕು. ಬಾಲಕಿಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು. 

ಹೆಚ್ಚುವರಿ ಪೊಲೀಸ್‌ ನಿರ್ದೇಶಕ ಡಾ| ಪರಶಿವಮೂರ್ತಿ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಲೋಕಾಯುಕ್ತ ಪೊಲೀಸ್‌ ಅಧಿಧೀಕ್ಷಕ ಕೆ.ಎಚ್‌.ಜಗದೀಶ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next