ಮಂಗಳೂರು: ಧರ್ಮಸ್ಥಳದ ಪುರ್ಜೆಬೈಲು ಎಂಬಲ್ಲಿ ನಡೆದ ನಾರಾಯಣ ಮಾವುತ ಮತ್ತು ಅವರ ತಂಗಿ ಯಮುನಾ ಜೋಡಿ ಕೊಲೆ ಪ್ರಕರಣದಲ್ಲಿ 11 ವರ್ಷವಾದರೂ ಪೊಲೀಸ್ ಇಲಾಖೆ ನೈಜ ಅಪರಾಧಿಗಳನ್ನು ಪತ್ತೆ ಹಚ್ಚದೆ “ಸಿ ರಿಪೋರ್ಟ್’ ಹಾಕಿದೆ.
ನ್ಯಾಯಾಲಯದಿಂದ ಸಿ- ರಿಪೋರ್ಟ್ ಪಡೆದು ಪರಿಶೀಲಿಸಿದಾಗ ಈ ಪ್ರಕರಣದಲ್ಲಿಯೂ ಸಂತೋಷ್ ರಾವ್‌ನನ್ನೇ ಆರೋಪಿಯನ್ನಾಗಿಸಲಾಗಿದೆ ಎಂದು ಸೌಜನ್ಯಾ ನ್ಯಾಯ ಪರ ಹೋರಾಟ ಸಮಿತಿ ಆರೋಪಿಸಿದೆ.
ಜೋಡಿ ಕೊಲೆ ಪ್ರಕರಣದಲ್ಲಿ ಸಂತೋಷ್‌ನನ್ನು ಆರೋಪಿಯನ್ನಾಗಿ ಮಾಡಿ ಅ. 18ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಂಚರ ಸಮಕ್ಷಮ ಆತನ ರಕ್ತದ ಮಾದರಿ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಮೃತನ ಸಂಬಂಧಿಕರು ದೂರು ನೀಡಲು ಲಭ್ಯವಿದ್ದರೂ, ಆತನ ಪತ್ನಿ ಮತ್ತು ಮಕ್ಕಳು ಸಂಶಯ ವ್ಯಕ್ತಪಡಿಸುವ ವ್ಯಕ್ತಿಯಿಂದ ದೂರು ಪಡೆದು ಎಫ್‌ಐಆರ್ ದಾಖಲಿಸಲಾಗಿದೆ.
ಈ ಮೂಲಕ ನೈಜ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ ಎಂದು ಶನಿವಾರ ಸಮಿತಿಯ ಪ್ರಮುಖರಾದ ಗಿರೀಶ್ ಮಟ್ಟೆಣ್ಣನವರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಯಮುನಾ ಅವರ ಮೇಲೆ ಅತ್ಯಾಚಾರ ನಡೆದ ಸಾಧ್ಯತೆಯನ್ನೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ ವರದಿಯಲ್ಲಿ ತಿಳಿಸಿದ್ದರು. ಅದರಂತೆ ಸಂತೋಷ್ ಮತ್ತು ಆಕೆಯ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸಂತೋಷ್ ರಾವ್ ಪಾತ್ರ ಇಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ 2015 ರ ಡಿಸೆಂಬರ್‌ನಲ್ಲಿ ಸಂತೋಷ್ ರಾವ್‌ನನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಆದರೆ ಸಂಶಯಾಸ್ಪದ ವ್ಯಕ್ತಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿಲ್ಲ ಎಂದರು.
ಸಮಿತಿ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾತನಾಡಿ, ಸೌಜನ್ಯ ಪ್ರಕರಣ ಜು. 2ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಬರಲಿದ್ದು, ವಾದ ಮಂಡಿಸುವಂತೆ ಸಿಬಿಐಗೆ ನ್ಯಾಯಾಲಯ ಸೂಚಿಸಿದೆ ಎಂದರು.