Advertisement

ಬ್ರಾಹ್ಮಣರಿಗೆ ರಾಜಕೀಯ ಶಕ್ತಿ ತುಂಬಲು ಯತ್ನ; ಗೆಲುವಿಗೆ ವಿಪ್ರರ ಕೊಡುಗೆ ಅಪಾರ

03:14 PM Jan 25, 2021 | Team Udayavani |

ಕಲಬುರಗಿ: ಬ್ರಾಹ್ಮಣ ಸಮುದಾಯಕ್ಕೆ ಮತ್ತಷ್ಟು ರಾಜಕೀಯ ಶಕ್ತಿ ತುಂಬುವ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡುವಂತೆ ಮತ್ತು ನಾಮನಿರ್ದೇಶನ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

Advertisement

ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ರವಿವಾರ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭೋತ್ಸವ 2020-21 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಾಹ್ಮಣ ಸಮಾಜವು ಮತ್ತೂಬ್ಬರಿಗೆ ಸಹಾಯ ಮಾಡುವ ಸಮಾಜವೇ ಹೊರತು, ಇನ್ನೊಬ್ಬರಿಂದ ಪಡೆಯುವ ಸಮಾಜವಲ್ಲ. ಬಡ ಬ್ರಾಹ್ಮಣರ ಅಭಿವೃದ್ಧಿ ಮತ್ತು ಅವರಿಗೆ ನೆರವು ಕಲ್ಪಿಸಲು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡುವಂತೆ ಅನೇಕ
ವರ್ಷಗಳಿಂದ ಕೇಳಲಾಗುತ್ತಿತ್ತು. ಆದರೆ, ಯಾವುದೇ ಸರ್ಕಾರ ಸ್ಪಂದಿಸಿರಲಿಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಳಿ ರಚಿಸುವ ಮೂಲಕ
ಸಮಾಜದ ಬೇಡಿಕೆ ಈಡೇರಿದ್ದಾರೆ ಎಂದರು.

ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅಧಿಕ ಅನುದಾನ ಬಳಕೆ ಮಾಡಬೇಕು ಮತ್ತು ಹೆಚ್ಚಿನ ಸವಲತ್ತು ಕಲ್ಪಿಸಬೇಕು. ನನ್ನ ಗೆಲುವಿನಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮತ್ತು ಕೊಡುಗೆ ಅಪಾರವಾಗಿದೆ. ನಿಮ್ಮ ಆಶೀರ್ವಾದದಿಂದಲೇ ನಾನು ಗೆಲುವು ಸಾಧಿಸಿದ್ದೇನೆ. ನಿಮ್ಮ ಕೊಡುಗೆ ಮರೆಯುವುದಿಲ್ಲ. ನಿಮ್ಮ ಪಾಲಿನ ಸೇವಕ ನಾನು ಎಂದು ಹೇಳಿದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯವರಿದ್ದಾರೆ. ಅವರು ವಾಸಿಸುವ ಪ್ರದೇಶಗಳಲ್ಲಿ ಕೆಕೆಆರ್‌ ಡಿಬಿಯಿಂದ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಮಾಡಿಕೊಡಬೇಕು ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌. ಎಸ್‌. ಸಚ್ಚಿದಾನಂದ ಮೂರ್ತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 73 ವರ್ಷ ಕಳೆದರೂ ಬ್ರಾಹ್ಮಣರಿಗೆ
ಯಾವ ಸರ್ಕಾರವೂ ಜಾತಿ ಪ್ರಮಾಣಪತ್ರ ನೀಡಿಲ್ಲ. ಈಗಿನ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ  ಮೇಲ್ವರ್ಗಗಳಿಗೂ ಜಾತಿ ಪ್ರಮಾಣಪತ್ರ ಮತ್ತು
ಮೀಸಲಾತಿ ನಿಗದಿ ಪಡಿಸಿದೆ. ರಾಜ್ಯದಲ್ಲೂ ಜಾತಿ ಪ್ರಮಾಣಪತ್ರ ವಿತರಣೆ ಮಾಡಬೇಕೆಂದು ಕೋರಿದ ಮರು ಕ್ಷಣವೇ ಜಾತಿ ಪ್ರಮಾಣಪತ್ರ ವಿತರಣೆಗೆ ಕ್ರಮ
ಕೈಗೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಎನ್ನುವ ಮಾನದಂಡದ ಪ್ರಕಾರವೇ ಮಂಡಳಿ ತನ್ನ ಕಾರ್ಯಯೋಜನೆಗಳನ್ನು ರೂಪಿಸಲಿದೆ ಎಂದು
ಹೇಳಿದರು.

Advertisement

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್‌, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ವೇದಬ್ರಹ್ಮ ಡಾ| ವಿ.ಭಾನುಪ್ರಕಾಶ ಶರ್ಮಾ, ಜಗದೀಶ ಹುನಗುಂದ ಮಾತನಾಡಿದರು. ಗಂವ್ಹಾರದ ತ್ರಿವಿಕಮಾನಂದ ಸಂಸ್ಥಾನದ ಮಠದ ಸೋಫಾನಾಥ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಿಗಮದ ನಿರ್ದೇಶಕರಾದ ಸುಬ್ಬರಾಯ ಹೆಗಡೆ, ವತ್ಸಲಾ ನಾಗೇಶ, ಕೆ.ಎಸ್‌. ಛಾಯಾಪತಿ,
ಜಗನ್ನಾಥ ಕುಲಕರ್ಣಿ, ಜಿಮ್ಸ್‌ ನಿರ್ದೇಶಕ ಪ್ರಲ್ಹಾದ ಪೂಜಾರಿ, ರಾಘವೇಂದ್ರ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಆರು ವಿದ್ಯಾರ್ಥಿಗಳಿಗೆ ಪುರಸ್ಕಾರ
ಪ್ರತಿಭೋತ್ಸವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಅದಿತಿ ಓಂಕಾರ, ಶ್ರೀಹರಿ ಜಯತೀರ್ಥ ಕುಲಕರ್ಣಿ, ಸೃಷ್ಟಿ ಭೀಮಾಸೇನ ಕುಲಕರ್ಣಿ, ಬೀದರ್‌ ಜಿಲ್ಲೆಯ ಆರತಿ ನಿಶಿಕಾಂತ ಕುಲಕರ್ಣಿ, ರಂಜಿತಾ ರಾಜು ಪಠವಾರಿ, ಮಯೂರ ಮಹೇಶ ಕುಲಕರ್ಣಿ ಅವರಿಗೆ ಕ್ರಮವಾಗಿ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ತೃತೀಯ 5 ಸಾವಿರ ನಗದು ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅಲ್ಲದೇ, ವಿಪ್ರ ಗಣ್ಯರಿಗೆ ಗೌರವ ಮತ್ತು ಗ್ರಾಮ ಪಂಚಾಯಿತಿ ವಿಪ್ರ ಸದಸ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next