ಮೈಸೂರು: ಅಪಘಾತ ಎಸಗಿದ್ದಾರೆ ಎಂದು ಆರೋಪಿಸಿ ಕಾರು ಚಾಲಕನನ್ನು ಅಡ್ಡಗಟ್ಟಿದ ದುಷ್ಕರ್ಮಿಯೊಬ್ಬ ಹಣ ವಸೂಲಿಗೆ ಯತ್ನಿಸಿರುವ ಘಟನೆ ನಗರದ ಜೆಎಲ್‌ಬಿ ರಸ್ತೆಯ ದಾಸಪ್ಪ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಕಾರಿನಲ್ಲಿ ಬರುತ್ತಿದ್ದ ಯಾದವಗಿರಿಯ ನಿವಾಸಿ ಉದ್ಯಮಿಯನ್ನು ಸ್ಕೂಟರ್‌ನಲ್ಲಿ ಬಂದು ಅಡ್ಡಗಟ್ಟಿದ ಯುವಕನೊಬ್ಬ, ನಿಮ್ಮ ಕಾರು ಢಿಕ್ಕಿ ಹೊಡೆದುದರಿಂದ ನನ್ನ ತಮ್ಮ ಬಿದ್ದು ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಲು ಹಣ ನೀಡಿ ಎಂದು ಒತ್ತಾಯಿಸಿದ್ದಾನೆ.
ಯುವಕನ ವರ್ತನೆಯಿಂದ ಗಾಬರಿಯಾದ ಉದ್ಯಮಿ ಅಪಘಾತ ವಾಗಿರುವ ಬಗ್ಗೆ ಗೊತ್ತಾಗಿಲ್ಲ. ಆಸ್ಪತ್ರೆಗೆ ದಾಖಲಿಸೋಣ ನಾನು ಬರುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಕಿಡಿಗೇಡಿ ನೀವು ಬರುವುದು ಏನು ಬೇಡ ಜನ ಸೇರಿದ್ದಾರೆ. ನೀವು ಬಂದರೆ ಗಲಾಟೆಯಾಗಲಿದ್ದು, 30 ಸಾವಿರ ರೂ. ಹಣ ನೀಡಿ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ, ಇಲ್ಲದಿದ್ದರೆ ಪೊಲೀಸರಿಗೆ ದೂರು ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ.
ಅಷ್ಟರಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಬಳಿಕ ಉದ್ಯಮಿ ಶೃಂಗಾರ ಹೊಟೇಲ್ ಬಳಿ ಬಂದರೆ ಹಣ ನೀಡುವುದಾಗಿ ಹೇಳಿ ಮುಂದೆ ಸಾಗಿದ್ದು, ಇನ್ನು ಹಣ ಸಿಗಲಾರದೆಂದು ಬೈಕ್ ಸವಾರ ಕೂಡ ಸ್ಥಳದಿಂದ ಕಾಲ್ಕಿತ್ತಿದ್ದಾನೆ.