ಪುಂಜಾಲಕಟ್ಟೆ / ಬಂಟ್ವಾಳ: ತುಳು ನಾಟಕ ತಂಡದ ಸಂಚಾಲಕನೊಬ್ಬ ಕಲಾವಿದೆ ಒಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯ ಅಶ್ಲೀಲ ಚಿತ್ರದ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು ಬಳಿಕ ಮದುವೆಗೆ ನಿರಾಕರಿಸಿ ವಂಚಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಸಂಭವಿಸಿದೆ.
ಬಂಟ್ವಾಳ ತಾ| ಕೊಯಿಲ ನಿವಾಸಿ ಪುರುಷೋತ್ತಮ ಪೂಜಾರಿ ಯುವತಿಗೆ ವಂಚಿಸಿದ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಸಹಕರಿಸಿದ ಆರೋಪದಲ್ಲಿ ಜಗದೀಶ ಕೊಯಿಲ ಹಾಗೂ ಪ್ರವೀಣ್ ಮೇಲೂ ಪ್ರಕರಣ ದಾಖಲಾಗಿದ್ದು, ಇವರಿಬ್ಬರೂ ತಲೆಮರೆಸಿಕೊಂಡಿದ್ದಾರೆ.
ಪ್ರಕರಣದ ವಿವರ: ಆರೋಪಿ ಪುರುಷೋತ್ತಮ ಕೊಯಿಲ ನಾಟಕ ತಂಡವೊಂದರ ಸಂಚಾಲಕನಾಗಿದ್ದು, ಯುವತಿ ಆ ತಂಡದ ಕಲಾವಿದೆಯಾಗಿದ್ದಳು. 2017ರ ಆಗಸ್ಟ್ 25ರಂದು ಉಡುಪಿಯಲ್ಲಿ ನಾಟಕ ಪ್ರದರ್ಶನ ಮುಗಿಸಿ ಬರುವ ವೇಳೆ ತಡರಾತ್ರಿಯಾದುದರಿಂದ ಸಹ ಕಲಾವಿದರ ಸಹಿತ ಈಕೆ ಅಂದು ಪುರುಷೋತ್ತಮನ ಮನೆಯಲ್ಲಿ ವಾಸ್ತವ್ಯವಿದ್ದರು.ಇದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ತನ್ನ ಮಾನಭಂಗಕ್ಕೆ ಯತ್ನಿಸಿದ್ದಾಗಿ ನೊಂದ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಬಳಿಕ ಕಳೆದ ಡಿಸೆಂಬರ್‌ನಲ್ಲಿ ಆರೋಪಿ ತನ್ನನ್ನು ಪುಸಲಾಯಿಸಿ ಪಿಲಿಕುಳಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅಶ್ಲೀಲ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ಗೊತ್ತಾದ ಕೂಡಲೇ ಪ್ರಶ್ನಿಸಿದಾಗ ವಿವಾಹವಾಗುವುದಾಗಿ ನಂಬಿಸಿದ್ದ. ಬಳಿಕ ಆರೋಪಿಯ ಗೆಳೆಯರಾದ ಜಗದೀಶ ಕೊಯಿಲ ಮತ್ತು ಪ್ರವೀಣ ಅವರು ಸೇರಿ ವಿವಾಹ ನಿಶ್ಚಯಿಸಿ ಆಮಂತ್ರಣ ಪತ್ರ ಕೂಡ ಮುದ್ರಿಸಿದ್ದರು. ಆದರೆ ಅನಂತರ ಮದುವೆಯಾಗದೆ ವಂಚಿಸಿದ್ದ, ಮಾತ್ರವಲ್ಲದೆ ಬೆದರಿಕೆಯೊಡ್ಡಿದ್ದ ಎಂದು ಯುವತಿ ದೂರಿದ್ದಾಳೆ.
ಜಗದೀಶ ಪಕ್ಷವೊಂದರ ಬಂಟ್ವಾಳ ಬ್ಲಾಕ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ನಾಗಿದ್ದು, ಆತನ ನಾಪತ್ತೆ ಕುರಿತಂತೆ ವಾಟ್ಸ್‌ಆ್ಯಪ್‌ನಲ್ಲಿ ಸುದ್ದಿ ವೈರಲ್ ಆಗಿದೆ.
ಯುವತಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದು, ಪುರುಷೋತ್ತಮನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.