Advertisement

ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನ

12:23 PM May 28, 2019 | Suhan S |

ಸಾಗರ: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಪ್ರತಿ ವಾರ್ಡ್‌ನಲ್ಲಿಯೂ 100 ರಿಂದ 200 ಮತದಾರರ ಹೆಸರನ್ನು ದುರುದ್ದೇಶಪೂರ್ವಕವಾಗಿ ಸೇರಿಸಲಾಗಿದ್ದು, ಬಿಜೆಪಿ ವಾಮಮಾರ್ಗದ ಮೂಲಕ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌ ದೂರಿದರು.

Advertisement

ನಗರದ ಅಣಲೆಕೊಪ್ಪದ ಪತ್ರಿಕಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವವರ ಹೆಸರುಗಳನ್ನು ನಗರ ಮತದಾರರ ಪಟ್ಟಿಯಲ್ಲಿ ಸೇರಿಸಿ ಅಕ್ರಮವಾಗಿ ವಾರ್ಡ್‌ ಗೆಲುವಿಗೆ ಮುಂದಾಗಿರುವ ಬಿಜೆಪಿ ಕ್ರಮವನ್ನು ಕಾಂಗ್ರೆಸ್‌ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

ವಾರ್ಡ್‌ ನಂ. 23ರ ಭಾಗ ಸಂಖ್ಯೆ 41ರಲ್ಲಿ 151 ಮತ್ತು ಭಾಗ ಸಂಖ್ಯೆ 2ರಲ್ಲಿ 74 ಮತದಾರರ ಹೆಸರನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ. ಈ ರೀತಿ ಸೇರಿಸಲ್ಪಟ್ಟವರು ವಾರ್ಡ್‌ ವ್ಯಾಪ್ತಿಯಲ್ಲಿ ವಾಸವಿಲ್ಲ. ಜೊತೆಗೆ ಸುಳ್ಳು ವಿಳಾಸ, ಸಂಖ್ಯೆಗಳನ್ನು ನೀಡಲಾಗಿದೆ. ಈ ಬಗ್ಗೆ ಚುನಾವಣೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇಂತಹ ಹೆಸರು ಸೇರ್ಪಡೆ ಹಿಂದೆ ಬಿಜೆಪಿ ಮತ್ತು ತಾಲೂಕು ಕಚೇರಿಯ ಚುನಾವಣಾ ಸಿಬ್ಬಂದಿ ಶಾಮೀಲಾಗಿದ್ದಾರೆ. ಇವರ ವಿರುದ್ದ ಕೂಡಲೆ ತಹಶೀಲ್ದಾರ್‌ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚುನಾವಣೆ ದಿನ ಕಾಂಗ್ರೆಸ್‌ ಪಕ್ಷ ಮತಗಟ್ಟೆಯ ಬಳಿ ಇದ್ದು ಗ್ರಾಮಾಂತರ ಪ್ರದೇಶದಲ್ಲಿಯೂ ಹೆಸರಿದ್ದು, ನಗರವ್ಯಾಪ್ತಿ ಮತಗಟ್ಟೆಯಲ್ಲೂ ಹೆಸರು ಹೊಂದಿರುವವರು ಮತ ಚಲಾವಣೆಗೆ ಬಂದರೆ ಅವರ ವಿರುದ್ಧ ಪ್ರತಿಭಟನೆ ಮಾಡಲಿದೆ. ಇವರಿಗೆ ಯಾವುದೇ ಕಾರಣಕ್ಕೂ ಪಕ್ಷ ಮತ ಚಲಾಯಿಸಲು ಬಿಡುವುದಿಲ್ಲ. ತಕ್ಷಣ ಅಕ್ರಮ ಸೇರ್ಪಡೆಯನ್ನು ಚುನಾವಣಾಕಾರಿಗಳು ರದ್ದುಪಡಿಸಬೇಕು. ಇದರ ಹಿಂದೆ ಇರುವವರ ವಿರುದ್ಧ ಕಾನೂನು ಕ್ರಮ ಶೀಘ್ರವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಹರತಾಳು ಹಾಲಪ್ಪನವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದನ್ನು ಪಕ್ಷ ಖಂಡಿಸುತ್ತಿದೆ. ಟಿಪ್‌ಟಾಪ್‌ ಸಹೋದರರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ತಲಾ 10 ಲಕ್ಷ ನೀಡುತ್ತಿದ್ದಾರೆ. ಚುನಾವಣೆಗೆ 3 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರ ಎಂದರು.

Advertisement

ಈಗಾಗಲೇ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯವಾಗಿ ಪಕ್ಷೇತರವಾಗಿ ನಿಂತಿರುವವರು ತಾವು ಯಾರಿಂದಲೂ ಹಣ ಪಡೆದಿಲ್ಲ ಎಂದು ಶಾಸಕರಿಗೆ ತಿರುಗೇಟು ನೀಡುವ ಜೊತೆಗೆ ತಾವು ಹಣ ಪಡೆದಿದ್ದು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಮಾರಿಕಾಂಬಾ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲು ಸವಾಲು ಹಾಕುವ ಮೂಲಕ ಶಾಸಕರಿಗೆ ಎದಿರೇಟು ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಹೆಸರಿನಲ್ಲಿ ಚುನಾವಣೆಗೆ ನಿಂತವರು ಹಿಂದಿನ ನಗರಸಭೆ ಅಧ್ಯಕ್ಷರಾಗಿ ಮಾಡಿರುವ ಕೆಲಸ ಇಡೀ ನಗರದ ಜನರಿಗೆ ಗೊತ್ತಿದೆ. ಶ್ರೀರಾಮಪುರ ಬಡಾವಣೆ ರಸ್ತೆಯನ್ನು ಮೂರು ಬಾರಿ ಮಾಡಿದ್ದಾರೆ. ಕಳಪೆ ಕಾಮಗಾರಿ ವಿರುದ್ಧ ಜನರೇ ಧ್ವನಿ ಎತ್ತಿದ್ದರು. ತಾವು ಅಕ್ರಮ ಕೆಲಸಗಳನ್ನು ಮಾಡಿ ಈಗ ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ತಿರುಗುತ್ತಿದ್ದಾರೆ. ಸಾಗರ ನಗರದ ಜನರು ಪ್ರಜ್ಞಾವಂತರಾಗಿದ್ದು, ಈ ಬಾರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 22ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ. ಹೊಳೆಯಪ್ಪ, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌, ಟಿಎಪಿಎಂಸಿಎಸ್‌ ಅಧ್ಯಕ್ಷ ವೀರೇಶ್‌ ಬರೂರು, ತಾಪಂ ಸದಸ್ಯ ಚಂದ್ರಪ್ಪ ಕಲಸೆ, ತುಕಾರಾಮ ಬಿ. ಶಿರವಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next