ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಬಟ್ಟೆ ಅಂಗಡಿ ಶಟರ್ ಮುರಿದು ದೋಚಲು ಯತ್ನಿಸಿದ ತೃತೀಯ ಲಿಂಗಿಯೊಬ್ಬನನ್ನು ಅಲ್ಲೇ ಗಸ್ತು ತಿರುಗುತ್ತಿದ್ದ ಗೂರ್ಖನ ಸಮಯಪ್ರಜ್ಞೆಯಿಂದ ಸೆರೆ ಹಿಡಿದ ಕಾರಣ ಲಕ್ಷಾಂತರ ಮೌಲ್ಯದ ಬಟ್ಟೆ ಕಳ್ಳತನ ತಪ್ಪಿದೆ.
ಕಳ್ಳತನಕ್ಕೆ ಯತ್ನಿಸಿದ ತೃತೀಯ ಲಿಂಗಿಯನ್ನು ಕೊಪ್ಪಳ ಜಿಲ್ಲೆಯವನೆಂದು ಗುರುತಿಸಲಾಗಿದೆ. ಕಳ್ಳತನ ಕಂಡು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಗೂರ್ಖಾ ಬಹಾದ್ದೂರ್ ಸಿಂಗ್ ಥಾಪಾ ಇದೀಗ ವ್ಯಾಪಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ತನ್ನ ಜೀವದ ಹಂಗು ತೊರೆದು ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಕಳ್ಳತನ ತಪ್ಪಿಸಿದ್ದಕ್ಕೆ ನಗದು ಬಹುಮಾನ ಪಡೆದಿದ್ದಾನೆ.
ಗುರುವಾರ ಮಧ್ಯರಾತ್ರಿ ಮುದ್ದೇಬಿಹಾಳ ಪಟ್ಟಣದಲ್ಲಿನ ಮಹಾವೀರ ಜೈನ್ ಎಂಬರಿಗೆ ಸೇರಿದ ದಾದಾಗಣಪತಿ ಬಟ್ಟೆ ಅಂಗಡಿಯ ಶಟರ್ ಮುರಿದು, ಕಳ್ಳತನಕ್ಕೆ ಯತ್ನ ನಡೆದಿತ್ತು. ಈ ಹಂತದಲ್ಲಿ ಗಸ್ತು ತಿರುಗುತ್ತಿದ್ದ ಗೂರ್ಖಾ ಬಹಾದ್ದೂರಸಿಂಗ್ ಅಂಗಡಿ ಕಳ್ಳತನವನ್ನು ಕಂಡು ಕೂಡಲೇ ಅಂಗಡಿ ಮಾಲೀಕನಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅಷ್ಟರಲ್ಲಿ ಹೊರಗಿನಿಂದ ಯಾರೋ ಮಾತನಾಡಿದ ಸದ್ದು ಕೇಳಿದ 3-4 ಜನ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಜೀವದ ಹಂಗು ತೊರೆದ ಬಹಾದ್ದೂರ್ ಸಿಂಗ್ ತೃತೀಯ ಲಿಂಗಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.
ಇದನ್ನೂ ಓದಿ:ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !
ಕಳ್ಳತನಕ್ಕೆ ಯತ್ನಿಸಿದವರು ಅಂಗಡಿಯಲ್ಲಿನ ಬೆಳೆ ಬಾಳುವ ಸುಮಾರು 3-4 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಗಂಟು ಕಟ್ಡಿ ಇಟ್ಡಿದ್ದರು. ಗೂರ್ಖಾ ಅದೇ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದು, ಸಮಯಪ್ರಜ್ಞೆ ತೋರದಿದ್ದಲ್ಲಿ ಕಳ್ಳರ ಕೈಚಳಕ ಯಶಸ್ವಿಯಾಗಿ ನಡೆಯುತ್ತಿತ್ತು.
ಗೂರ್ಖಾ ಸೆರೆಹಿಡಿದು ಕೊಟ್ಟ ಆರೋಪಿ ರಾಯಣ್ಣ ತಾನು ತೃತೀಯ ಲಿಂಗಿಯಾಗಿದ್ದಾನೆ. ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸಾ ವೈದ್ಯಕೀಯ ವೆಚ್ಚಕ್ಕಾಗಿ 1 ಲಕ್ಷ ರೂ ಬೇಕಿತ್ತು. ಈ ಹಣ ಹೊಂದಿಸಿಕೊಳ್ಳಲು ಕಳ್ಳತನಕ್ಕೆ ಮುಂದಾಗಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.