Advertisement

ವಿದ್ಯಾಭ್ಯಾಸದ ಹಸಿವು ನೀಗಿಸಲು ತಲೆ ಎತ್ತಿದ ವಿದ್ಯಾದೇಗುಲಕ್ಕೆ ಈಗ 134 ವರ್ಷ

01:03 PM Nov 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಮಹಾನಗರ: ಸುತ್ತಮುತ್ತಲಿನ ಸುಮಾರು ಮೂರು ಕಿಲೋ ಮೀಟರ್‌ ವ್ಯಾಪ್ತಿಯ ಮಕ್ಕಳ ವಿದ್ಯಾಭ್ಯಾಸದ ಹಸಿವನ್ನು ನೀಗಿಸಲೆಂದು 134 ವರ್ಷಗಳ ಹಿಂದೆ ಕಿ.ಪ್ರಾ. ಶಾಲೆಯಾಗಿ ಆರಂಭವಾದ ಈ ಕನ್ನಡ ಶಾಲೆ ಪ್ರಸ್ತುತ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಮಂಗಳೂರು ನಗರದ ಅತ್ಯುತ್ತಮ ಶಾಲೆಗಳ ಪೈಕಿ ಗುರುತಿಸಿಕೊಂಡಿದೆ ಅತ್ತಾವರ ಶಾಲೆ.

1950ರಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು
ಅತ್ತಾವರ ಶಾಲೆಯು ಆರಂಭವಾದದ್ದು 1885ರಲ್ಲಿ . ಶಾಲೆ ಆರಂಭವಾದಾಗ ಅತ್ತಾವರದ ಜೈನ್‌ ಕಾಂಪೌಂಡ್‌ನ‌ ಖಾಸಗಿ ಜಾಗದಲ್ಲಿ ಕಟ್ಟಡವಿತ್ತು. ಬಳಿಕ 1.19 ಎಕರೆ ಸ್ವಂತ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸಿ ಪ್ರಾಥಮಿಕ ಶಾಲೆಯೊಂದಿಗೆ ಪ್ರೌಢಶಾಲೆ ಹಾಗೂ ಅಂಗನವಾಡಿಯನ್ನೂ ನಿರ್ಮಿಸಲಾಯಿತು. 1950ರ ಸಂದರ್ಭದಲ್ಲಿ ಇಲ್ಲಿ 300ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು ಎಂದು ನೆನೆಯುತ್ತಾರೆ ಇಲ್ಲಿನ ಹಳೆ ವಿದ್ಯಾರ್ಥಿಗಳು.

ಶಾಲಾರಂಭವಾಗಲು ನಿಖರವಾದ ಕಾರಣದ ಬಗ್ಗೆ ಇಲ್ಲಿ ಪ್ರಸ್ತುತ ಕಲಿಸುತ್ತಿರುವ ಶಿಕ್ಷಕರಿಗೆ ಮಾಹಿತಿ ಇಲ್ಲ. ಆದರೆ ಸುತ್ತಮುತ್ತಲಿನ ಕಾಪ್ರಿಗುಡ್ಡ, ಅತ್ತಾವರ, ಬಾಬುಗುಡ್ಡ, ಮೇಲಿನಮೊಗರು ಮತ್ತಿತರ ಕಡೆಗಳ ಮಕ್ಕಳಿಗೆ ವಿದ್ಯಾರ್ಜನೆಗೈಯಲು ಸನಿಹದಲ್ಲಿ ಶಾಲೆಗಳು ಇರಲಿಲ್ಲ. ಈ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕಾಗಿ ಅತ್ತಾವರದಲ್ಲಿ ಶಾಲೆ ನಿರ್ಮಾಣವಾಗಿರಬಹುದು ಎಂದಿದೆ ಶಿಕ್ಷಕ ವರ್ಗ. ಈಗ ಈ ಶಾಲೆಯ ವ್ಯಾಪ್ತಿಯಲ್ಲಿ ಬಾಬುಗುಡ್ಡೆ ಸರಕಾರಿ ಶಾಲೆ ಮತ್ತು ಕೆಲವು ಖಾಸಗಿ ಶಾಲೆಗಳು ತಲೆ ಎತ್ತಿವೆ.

ಶಾಲೆಯಲ್ಲಿ ಕಲಿತ ಸಾಧಕ ಹಳೆ ವಿದ್ಯಾರ್ಥಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಚಕ್ರಪಾಣಿ ದೇವಸ್ಥಾನದ ಆನುವಂಶಿಕ ಅರ್ಚಕ ಗೋಪಾಲಕೃಷ್ಣ ಭಟ್‌ ಅವರು ಇದೇ ಶಾಲೆಯಲ್ಲಿ ಓದಿದ್ದರು ಎನ್ನುತ್ತಾರೆ ಮುಖ್ಯ ಶಿಕ್ಷಕಿ.

Advertisement

ಸ್ವಾತಂತ್ರ್ಯಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ ಅವರ 100ನೇ ಜನ್ಮ ದಿನಾಚರಣೆಯನ್ನು 2012ರಲ್ಲಿ ಈ ಶಾಲೆಯಲ್ಲಿ ಆಚರಿಸಲಾಗಿತ್ತು.

ಆರಂಭದಲ್ಲಿ ಇದ್ದ ಮಕ್ಕಳ ಸಂಖ್ಯೆ ಈಗ ಇಲ್ಲ. ಖೇದಕರ ವಿಷಯವೆಂದರೆ ಆಂಗ್ಲ ಶಿಕ್ಷಣದತ್ತ ಆಕರ್ಷಿತರಾಗಿರುವುದರಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಅತ್ತಾವರ ಶಾಲೆಗೆ ಸ್ಥಳೀಯ ಮಕ್ಕಳು ಬರುತ್ತಿಲ್ಲ. ಬಾಗಲಕೋಟೆ, ರಾಯಚೂರು, ಗದಗ ಮುಂತಾದೆಡೆಗಳಿಂದ ಬಂದಿರುವ ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣವೂ ಇಲ್ಲಿ ಆರಂಭವಾಗಿದೆ.

ಪ್ರಸ್ತುತ 126 ವಿದ್ಯಾರ್ಥಿಗಳು
ಶಾಲೆಯಲ್ಲಿ ಪ್ರಸ್ತುತ 126 ಮಂದಿ ಮಕ್ಕಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸೇರಿ ಐವರು ಶಿಕ್ಷಕರಿದ್ದಾರೆ. ಶೌಚಾಲಯ, ವಿದ್ಯುತ್‌, ನೀರು, ಸುಸಜ್ಜಿತ ರಂಗಮಂದಿರ, ಕೈತೋಟ, ಇಸ್ಕಾನ್‌ನಿಂದ ಬಿಸಿಯೂಟ ಸೌಲಭ್ಯ ಶಾಲಾ ಮಕ್ಕಳಿಗಿದೆ. ಆದರೆ ಸುಸಜ್ಜಿತ ಗ್ರಂಥಾಲಯ, ಕ್ರೀಡಾಂಗಣ, ಪ್ರಯೋಗಾಲಯ, ಕಂಪ್ಯೂಟರ್‌ ಕೊಠಡಿಯ ಕೊರತೆ ಎದ್ದು ಕಾಣುತ್ತಿದೆ. ಮುಖ್ಯ ಶಿಕ್ಷಕಿ ಮತ್ತು ಇತರ ಶಿಕ್ಷಕರಿಗೆ ಬೋಧಕ ಕೊಠಡಿಯೂ ಇಲ್ಲ. ತರಗತಿ ಕೋಣೆ, ಸಣ್ಣ ಗ್ರಂಥಾಲಯವನ್ನೇ ಬೋಧಕ ಕೊಠಡಿಯಾಗಿ ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಕೈತೋಟದಲ್ಲಿ ಮಕ್ಕಳೇ ಕೃಷಿಕರು
ಶಾಲಾ ಪರಿಸರವನ್ನು ಸ್ವತ್ಛವಾಗಿರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಶುಚಿತ್ವದ ಪಾಠ ಸದಾ ಹೇಳಿಕೊಡಲಾಗುತ್ತದೆ. ಪರಿಸರವನ್ನು ನಿತ್ಯವೂ ಮಕ್ಕಳಿಂದಲೇ ಶುಚಿಗೊಳಿಸಲಾಗುತ್ತದೆ. ಶಾಲೆಯಲ್ಲಿ ಸಣ್ಣ ಕೈತೋಟವೊಂದಿದ್ದು, ಅದರ ನಿರ್ವಹಣೆಯನ್ನು ಮಕ್ಕಳಿಂದಲೇ ಮಾಡಿಸಲಾಗುತ್ತದೆ.ಮಕ್ಕಳೇ ಕೃಷಿಕರಾಗಿ ಕೈತೋಟದಲ್ಲಿನ ಸಸ್ಯಗಳನ್ನು ಪೋಷಿಸುತ್ತಾರೆ.

ಸಾಧಕ ಹಳೆ ವಿದ್ಯಾರ್ಥಿಗಳು ಮತ್ತು ಶಾಲೆಯ ಇತಿಹಾಸದ ಬಗ್ಗೆ ನನಗೆ ತಿಳಿದಿಲ್ಲ. ನಾನು ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಬಂದು ಕೆಲವೇ ಸಮಯವಾಯಿತಷ್ಟೇ. ಇದೊಂದು ಅತ್ಯುತ್ತಮ ಶಾಲೆಯಾಗಿದ್ದು, ಉತ್ತಮ ಭವಿಷ್ಯ ರೂಪಿಸುವಲ್ಲಿ ತೊಡಗಿಸಿಕೊಂಡಿದೆ. ಮುಂದೆಯೂ ಕ್ಲಾಸ್‌ರೂಂ ಶಿಕ್ಷಣದೊಂದಿಗೆ ಬದುಕಿನ ಶಿಕ್ಷಣವನ್ನೂ ಹೇಳಿಕೊಡಲಾಗುವುದು.
-ಪ್ಲೇವಿಯಾ ಎನ್‌. ತಾವ್ರೋ,
ಮುಖ್ಯ ಶಿಕ್ಷಕಿ

ನಾನು 1957ರಲ್ಲಿ ಅತ್ತಾವರ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆಗ ತಾರಾ ಅವರು ಮುಖ್ಯ ಶಿಕ್ಷಕಿಯಾಗಿದ್ದರು. ಅದಕ್ಕೂ ಹಿಂದೆ ಯಾರೆಲ್ಲ ಶಿಕ್ಷಕರಾಗಿದ್ದರು ಗೊತ್ತಿಲ್ಲ. ಉತ್ತಮ ಶಿಕ್ಷಣ ಆ ಶಾಲೆಯಲ್ಲಿ ದೊರಕಿದೆ. ಅಲ್ಲಿ ದೊರಕಿದ ಬದುಕಿನ ಪಾಠ ನಮ್ಮ ವ್ಯಕ್ತಿತ್ವ ರೂಪಿಸಿದೆ.
-ಗೋಪಾಲಕೃಷ್ಣ ಭಟ್‌, ಅತ್ತಾವರ ಚಕ್ರಪಾಣಿ ದೇವಸ್ಥಾನದ ಆನುವಂಶಿಕ ಅರ್ಚಕ

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next