Advertisement

ಗಮನ ಸೆಳೆಯುತ್ತಿದೆ ಸಾಲಭಾವಿ ಶಾಲೆ

01:02 PM Nov 22, 2019 | Team Udayavani |

ಯಲಬುರ್ಗಾ: ತಾಲೂಕಿನ ಸಾಲಭಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲ್ವೆ ಮಾದರಿಯಲ್ಲಿ ಕಂಗೊಳಿಸುತ್ತಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಮಕ್ಕಳ ಮನಸ್ಸನ್ನು ಶಾಲೆಗಳತ್ತ ಸೆಳೆಯಲು ತಮ್ಮದೇ ಆದ ಪ್ರಯತ್ನ ನಡೆಸುತ್ತಿವೆ. ಅಂತಹ ಪ್ರಯತ್ನದಲ್ಲಿ ಸಾಲಭಾವಿ ಶಾಲಾ ಕಟ್ಟಡವನ್ನು ಭಾರತೀಯ ರೈಲ್ವೆ ಮಾದರಿ ಅಲಂಕರಿಸಿ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಲು ಮುಂದಾಗಿದ್ದಾರೆ.

Advertisement

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 174 ವಿದ್ಯಾರ್ಥಿಗಳಿದ್ದಾರೆ. ಒಟ್ಟು ಎಂಟು ಕೊಠಡಿ ಸೇರಿದಂತೆ ಕಾಂಪೌಂಡ್‌ ಬಣ್ಣ ಮಾಸಿ ಹೋಗಿ ದುರಸ್ತಿಗೆ ಬಂದಿತ್ತು. ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ಮಕ್ಕಳ ಪಾಲಕರು, ಯುವಕರು, ಶಾಲಾ ಶಿಕ್ಷಕರು ಸಭೆ ನಡೆಸಿ ವೈಯಕ್ತಿಕ 30 ಸಾವಿರ ರೂ. ದೇಣಿಗೆ ಸಂಗ್ರಹಿಸಿದ್ದು, ಆ ಹಣದಲ್ಲಿ ಶಾಲಾಕಟ್ಟಡ ಅಲಂಕರಿಸಲಾಗಿದೆ. ಶಾಲೆಯಲ್ಲಿ ಮೂವರು ಖಾಯಂ ಶಿಕ್ಷಕರು, ಮೂವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ವಿನೂತನ ಪ್ರಯೋಗಕ್ಕೆ ಮುಂದಾಗಲಾಗಿದೆ.

ಮಕ್ಕಳಲ್ಲಿ ಕಲಿಕಾ ಆಸಕ್ತಿ, ಕ್ರಿಯಾಶೀಲತೆ ಹೆಚ್ಚುತ್ತದೆ, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಶಾಲೆಯತ್ತ ಬರುತ್ತಿದ್ದಾರೆ. ಇದರಿಂದ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ಇಂತಹ ನೂತನ ಪ್ರಯೋಗ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಸರಕಾರದ ಅನುದಾನ ನೆಚ್ಚಿ ಕುಳಿತುಕೊಳ್ಳದೇ ಗ್ರಾಮಸ್ಥರು ವೈಯಕ್ತಿಕ ದೇಣಿಗೆ ಸಂಗ್ರಹಿಸಿ ಈ ಕಾರ್ಯ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಈ ಹಿಂದೆ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿತ್ತು. ಬದಲಾದ ಕಾಲ ಘಟ್ಟದಲ್ಲಿ ಗ್ರಾಮಸ್ಥರ ಶೈಕ್ಷಣಿಕ ಪ್ರಜ್ಞೆ ಹೆಚ್ಚಾಗಿದ್ದು, ಶಾಲೆ ಅಭಿವೃದ್ಧಿ ಜೊತೆಗೆ ಮಕ್ಕಳ ಶೈಕ್ಷಣಿಕ ಮನೋವಿಕಾಸ ಬೆಳವಣಿಗೆಯಾಗುತ್ತಿದೆ. ಈ ಮೊದಲು ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಮಾತ್ರ ಇತ್ತು. ಇದೀಗ 2010ರಿಂದ ಉನ್ನತೀಕರಣಗೊಂಡು ಏಳನೇ ತರಗತಿವರೆಗೆ ಶಾಲೆ ಇದೆ.

ಗ್ರಾಮಸ್ಥರ ಕಾಳಜಿ: ಕೆಲ ದಿನಗಳಿಂದ ಗ್ರಾಮಸ್ಥರು ಶಾಲೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ವಾರಕ್ಕೊಮ್ಮೆ ಸಭೆ ನಡೆಸಿ ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತಿದ್ದಾರೆ. ಪ್ರೇರಣಾ ಕ್ಲಬ್‌, ಸಂಸತ್‌ ರಚನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ತಿಂಗಳಿಗೊಮ್ಮೆ ಪಾಲಕರ ಸಭೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯ ಅಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಯಲ್ಲಿಯೇ ಮುಂದುವರಿದಿದ್ದಾರೆ. ಗ್ರಾಮೀಣ ಪ್ರದೇಶಗಳ ಇತರೆ ಶಾಲೆಗಳಿಗೆ ಸಾಲಭಾವಿ ಶಾಲೆ ಬಹಳ ಮಾದರಿಯಾಗಿದೆ.

Advertisement

ಇಂತಹ ವಿನೂತನ ಪ್ರಯೋಗಗಳಿಂದ ಮಕ್ಕಳಲ್ಲಿ ಉತ್ಸಾಹ ತುಂಬಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡುತ್ತಿದೆ. ಶೈಕ್ಷಣಿಕ ಬೆಳವಣಿಗೆಯಲ್ಲಿ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರ ಪ್ರೋತ್ಸಾಹ ಇದೆ.-ಶಿವಾನಂದ ಬಾಗವಡಮಠ, ಮುಖ್ಯಶಿಕ್ಷಕ

 ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲುಗ್ರಾಮಸ್ಥರ ಸಹಕಾರದ ಜೊತೆಗೆ ಶಾಲಾ ಶಿಕ್ಷಕರ ಪರಿಶ್ರಮವು ಸಾಕಷ್ಟಿದೆ. ನಮ್ಮೂರ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸ ತಂದಿದೆ.ಮಾನಪ್ಪ ಸೂಳಿಕೇರಿ, ಎಸ್‌ಡಿಎಂಸಿ ಅಧ್ಯಕ್ಷ

 

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next