ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆರಾಧನಾ ಕೇಂದ್ರ ಗೋರಖನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಇಬ್ಬರು ಪಿಎಸಿ ಕಾನ್‌ಸ್ಟೆಬಲ್‌ಗಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಘಟನೆಯ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಹಸ್ತಾಂತರಿಸಲು ಸರಕಾರ ನಿರ್ಧರಿಸಿದೆ.
ಭಾನುವಾರ ಮುರ್ತಾಜಾ ಎಂಬಾತ “ಅಲ್ಲಾಹು ಅಕ್ಬರ್” ಎಂಬ ಘೋಷಣೆಯನ್ನು ಕೂಗಿ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹರಿತವಾದ ಆಯುಧದೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ವೇಳೆ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದರು. ಗೇಟ್ ಬಳಿಯ ಪಿಎಸಿ ಪೋಸ್ಟ್‌ಗೆ ಹೋಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ಗೋರಖ್‌ಪುರ ವಲಯದ ಎಡಿಜಿ ಅಖಿಲ್ ಕುಮಾರ್ ಹೇಳಿದರು. ದಾಳಿಯಲ್ಲಿ ಗಾಯಗೊಂಡ ಆರೋಪಿಯನ್ನು ಕಾನ್‌ಸ್ಟೆಬಲ್‌ಗಳು ಹಿಡಿದಿದ್ದರು ಎಂದು ಅವರು ಹೇಳಿದ್ದಾರೆ.
ಗಾಯಗೊಂಡ ಕಾನ್‌ಸ್ಟೆಬಲ್‌ಗಳಾದ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಅವರಿಗೆ ಗುರು ಗೋರಖ್‌ನಾಥ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಮುರ್ತಾಜಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಗೋರಖ್‌ಪುರದ ನಿವಾಸಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಕುಮಾರ್ ಹೇಳಿದ್ದಾರೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಾಗ್ಗೆ ಈ ಪ್ರದೇಶಕ್ಕೆ ಭೇಟಿ ನೀಡುವುದರಿಂದ ಭಯೋತ್ಪಾದನೆಯ ಕೋನವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಹೇಳಿದರು. ಘಟನೆಯನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಿದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿ ತಿಳಿಸಿದ್ದಾರೆ.
ಏತನ್ಮಧ್ಯೆ, ಘಟನೆಯ ಭಯೋತ್ಪಾದನೆಯ ಕೋನವನ್ನು ತಳ್ಳಿಹಾಕಲು ಸಾಧ್ಯವಾಗದ ಕಾರಣ ಉತ್ತರ ಪ್ರದೇಶ ಸರ್ಕಾರವು ತನಿಖೆಯನ್ನು ಎಟಿಎಸ್ ಗೆ ಹಸ್ತಾಂತರಿಸಲು ನಿರ್ಧರಿಸಿದೆ. “ಘಟನೆಯಲ್ಲಿ ಭಯೋತ್ಪಾದನೆಯ ಕೋನವನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲದ ಕಾರಣ ಪ್ರಕರಣವನ್ನು ಎಟಿಎಸ್‌ಗೆ ವರ್ಗಾಯಿಸಲಾಗಿದೆ ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ” ಎಂದು ವಿಪಿನ್ ತಾಡಾ, ಎಸ್‌ಎಸ್‌ಪಿ ಗೋರಖ್‌ಪುರ ತಿಳಿಸಿದ್ದಾರೆ.