ಬೆಂಗಳೂರು: ಪೊಲೀಸರು ಲಾಠಿಯಿಂದ ಹಲ್ಲೆ ಮಾಡಿರುವುದರಿಂದ ತನ್ವೀರ್ ಮೊಹಮ್ಮದ್(23) ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತನ್ವೀರ್ ಅವರ ತಮ್ಮ ಮೊಹಮ್ಮದ್ ಮುಸವೀರ್ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಯ್ಯಪ್ಪ ಮತ್ತು ಪಿಎಸ್‌ಐ ಸಂತೋಷ್‌ಕುಮಾರ್ ಲಾಠಿ ಮತ್ತು ರಾಡ್‌ನಿಂದ ಹಲ್ಲೆ ಮಾಡಿದ್ದು, ತನ್ವೀರ್ ಅವರನ್ನು ಕ್ವೀನ್ಸ್‌ರಸ್ತೆಯ ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ವೀರ್‌ನ ಕಿಡ್ನಿ ಸೇರಿದಂತೆ ದೇಹದ ಹಲವು ಅಂಗಾಂಗಗಳಿಗೆ ಹಾನಿಯಾಗಿದೆ’ ಎಂದು ಮುಸವೀರ್ ಹೇಳಿದರು.
ಕಾನ್‌ಸ್ಟೆಬಲ್ ಅಯ್ಯಪ್ಪ ಮತ್ತು ಪಿಎಸ್‌ಐ ಸಂತೋಷ್‌ಕುಮಾರ್ ಅವರನ್ನು ಅಮಾನತು ಮಾಡಲಾಗಿದೆಯಾದರೂ ಯಾವುದೇ ಕಠಿಣ ಕ್ರಮತೆಗೆದುಕೊಂಡಿಲ್ಲ. ತನ್ವೀರ್‌ಗೆ ಶ್ವಾಸಕೋಶ ಸಂಬಂಧಿಸಿದಂತೆ ದೇಹದ ತೊಡೆ ಭಾಗ ಮತ್ತು ಕಿಡ್ನಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ನ್ಯಾಯ ಒದಗಿಸಬೇಕು, ತನ್ವೀರ್‌ಗೆ ಸರ್ಕಾರಿ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ: ಮೊಹಮ್ಮದ್ ತನ್ವೀರ್ ಅವರ ತಂದೆ ಔಷಧಿ ತರಲು ಏ. 10ರಂದು ಅವರ ಗೆಳಯನೊಂದಿಗೆ ಬೈಕ್‌ನಲ್ಲಿ ಎಂ.ಎಂ ಲೇಔಟ್ ಮಾರ್ಗವಾಗಿ ಹೋಗುವಾಗ, ಡಿ.ಜೆ ಹಳ್ಳಿಯ ಪೊಲೀಸರು ಅಡ್ಡಗಟ್ಟಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದರು. ಮಾತಿನ ಚಕಮಕಿ ನಡೆದರಿಂದ ಪೊಲೀಸರು ಹೊಯ್ಸಳದಲ್ಲಿ ಬಲವಂತವಾಗಿ ಠಾಣೆಗೆ ಕರೆದುಕೊಂಡು ಹೋಗಿ ರಾಡ್ ಮತ್ತು ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
“ಮನೆಯವರೊಂದಿಗೆ ಮಾತನಾಡುತ್ತಿದ್ದೇನೆ ಸರ್ ಒಂದೆರಡು ನಿಮಿಷ ಎಂದು ಹೇಳಿದರೂ ಪೊಲೀಸರು ಲಾಠಿಬೀಸಿದ್ದಾರೆ. ಆಗ ನಿಮಗೆ ಏನು ರೈಟ್ಸ್ ಇದೆ ಹೀಗೆ ಹೊಡೆಯುವುದಕ್ಕೆ ಎಂದು ಕೇಳಿದ್ದಕ್ಕೆ ಪೊಲೀಸರು ಠಾಣೆಗೆ ಬಾ ರೈಟ್ಸ್ ತೋರಿಸುತ್ತೇವೆ ಎಂದು ಮನಸೋಇಚ್ಛೆ ಥಳಿಸಿ ಕಳುಹಿಸಿದ್ದಾರೆ’ ಎಂದು ಅವರ ತಮ್ಮ ಮೊಹಮ್ಮದ್ ಮುಸವೀರ್ ಆರೋಪಿಸಿದ್ದಾರೆ.
ಅಮಾನತು ಮಾಡಿ ಆದೇಶ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್‌ಸಿಂಗ್ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಯ್ಯಪ್ಪ ಮತ್ತು ಪಿಎಸ್‌ಐ ಸಂತೋಷ್‌ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಸಂಬಂಧಿಕರು, ಈ ಹಲ್ಲೆಯನ್ನು ಕೊಲೆಯತ್ನ ಪ್ರಕರಣ ಎಂದು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.