ಬೆಳ್ತಂಗಡಿ: ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಾ ರಾಜ್ಯಪಾಲರ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೆ, ಬಾಂಗ್ಲಾ ಮಾದರಿ ದಾಳಿ
ಮಾಡುವುದಾಗಿ ಐವನ್ ಡಿ’ ಸೋಜ ಹೇಳಿರುವುದು ಖಂಡನೀಯ.
ಅವರ ಮನೆ ಮೇಲೆ ತಡವಾಗಿ ದಾಳಿಯಾಗಿದೆ. ಪೊಲೀಸರು ಮೊದಲೇ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ವಿಹಿಂಪ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಥ ಹೇಳಿಕೆ ನೀಡಿರುವ ಜನಪ್ರತಿನಿಧಿ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸದೆ ಇರುವುದನ್ನು ಖಂಡಿಸುತ್ತೇವೆ. ರಸ್ತೆಯಲ್ಲಿ ನಮಾಜ್ ವಿಚಾರಕ್ಕೆ ನಾವು ಭಜನೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಕ್ಕೆ ನನ್ನನ್ನೂ ಸೇರಿಸಿ ಹಲವರ ವಿರುದ್ಧ ಸುಮೊಟೊ ಕೇಸು ದಾಖಲಿಸಿದ್ದಾರೆ. ಶಾಸಕ ಹರೀಶ್ ಪೂಂಜ ನಿರಪರಾಧಿ ಕಾರ್ಯಕರ್ತರ ಪರ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಬಂಧಿಸಲು ಬರುತ್ತಾರೆ. ಪೊಲೀಸರ ಇಂಥ ದ್ವಂದ್ವ ನಿಲುವು ಯಾಕಾಗಿ ಎಂದು ಪ್ರಶ್ನಿಸಿದರು.
ಪೊಲೀಸ್ ಇಲಾಖೆ ಕಾಂಗ್ರೆಸ್ ಪಕ್ಷದ ಕೈಗೊಂಬೆ ಯಾಗಿದೆ. ತತ್‌ಕ್ಷಣ ಐವನ್ ಡಿ’ಸೋಜಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.