ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಸಬ್ ಅರ್ಬನ್ ಬಸ್ ನಿಲ್ದಾಣ ಸುತ್ತಲಿನ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನ ಕಾಯ್ದೆಯಡಿ ಟೀ ಸ್ಟಾಲ್ ಹಾಗೂ ಇನ್ನಿತರ ಚಿಲ್ಲರೆ ಮಳಿಗೆಗಳನ್ನು ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ವಶಪಡಿಕೊಳ್ಳಲಾಯಿತು.
ತಂಬಾಕು ನಿಯಂತ್ರಣ ಕಾಯ್ದೆ-2003 ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ, ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಹಾರಾಜ ಕಾಂಪ್ಲೆಕ್ಸ್‌ನ ಕೇರಳಾಪುರ ಹರೀಶ್ ಮಿಲಿó ಹೋಟಲ್ ಮುಂಭಾಗ ಅಕ್ರಮವಾಗಿ ತಂಬಾಕು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರು ಹಾಗೂ ಇರ್ವೀನ್ ರಸ್ತೆಯ ಟೀ ಅಂಗಡಿ ವರ್ತಕರ ಮೇಲೆ ಎಫ್ಐಆರ್ ದಾಖಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಮೈಸೂರು ನಗರವನ್ನು ತಂಬಾಕು ಮುಕ್ತ ನಗರವನ್ನಾಗಿ ರೂಪಿಸಲು ಕಾರ್ಯಪ್ರೌವೃತ್ತರಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. 2019 ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ 1,162 ಪ್ರಕರಣ ದಾಖಲಿಸಿಕೊಂಡಿದ್ದು, 2.19 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದರೆ ಅವರ ವಿರುದ್ಧ “ಸ್ಟಾಪ್ ತಂಬಾಕು’ ಎಂಬ ಆ್ಯಪ್ ಮೂಲಕ ದೂರು ನೀಡಬಹುದು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಶಿವಪ್ರಸಾದ್ ಮಾತನಾಡಿ, ಸಾರ್ವಜನಿಕ ವಲಯಗಳಲ್ಲಿ ತಂಬಾಕು ಸೇವನೆ ಮಾಡುವುದನ್ನು ನಿಯಂತ್ರಿಸಲು ಕಾರ್ಯೋನ್ಮುಖವಾಗಿದ್ದು, ಈಗಾಗಲೇ ನಗರ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಂಬಾಕು ಬೆಳೆಯನ್ನು ಹೆಚ್ಚು ಬೆಳೆಯುವ ತಾಲ್ಲೂಕಿನ ರೈತರಲ್ಲೂ ಅರಿವು ಮೂಡಿಸಲು ಮುಂದಾಗಿದ್ದು, ಕೃಷಿ ಇಲಾಖೆಯಿಂದ ನೀಡುವ ಸೌಲಭ್ಯವನ್ನು ಬಳಸಿಕೊಂಡು ಪರ್ಯಾಯ ಬೆಳೆಯನ್ನು ಬೆಳೆಯಲು ತಿಳಿಸಲಾಗುವುದು. ಅಲ್ಲದೆ ಇದಕ್ಕೆ ಪೂರಕವಾಗಿ ಸರ್ಕಾರದಿಂದಲೂ ಉತ್ತೇಜನ ನೀಡಲಾಗುವುದು ಎಂದು ಹೇಳಿದರು. ಜಿಲ್ಲಾ ಸಲಹೆಗಾರರಾದ ಶಿವಕುಮಾರ್, ನಜರ್‌ಬಾದ್ ಪೊಲೀಸ್ ಠಾಣೆಯ ಎಎಸ್‌ಐ ಮಲ್ಲೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.