ಕುಣಿಗಲ್ : ಶಾಲೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಯನ್ನು ಶಾಲೆಗೆ ಕಳಿಸುವಂತೆ ಪೋಷಕರ ಬಳಿ ಮುಖ್ಯ ಶಿಕ್ಷಕನ್ನು ಕೇಳುತ್ತಿದ್ದ ವೇಳೆ ಪಾನಮತ್ತ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಲಾಳಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಹಲ್ಲೆಗೆ ಒಳಗಾದ ವ್ಯಕ್ತಿ.
ಘಟನೆ ವಿವರ : ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಹಲವು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದರಿಂದ ಪೋಷಕರನ್ನು ಕೇಳಲು ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಮಂಗಳವಾರ ಸಂಜೆ ಪೋಷಕರ ಮನೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾಗ ಪಕ್ಕದ ಪೆಟ್ಟಿಗೆ ಅಂಗಡಿ ಬಳಿ ಕುಳಿತ್ತಿದ್ದ ಪ್ರಸಾದ್ ಎಂಬುವವನು, ಅವರ ಮಕ್ಕಳನ್ನು ವಿಚಾರಿಸುತ್ತೀಯ ನಮ್ಮ ಮಕ್ಕಳನ್ನು ಏಕೆ ವಿಚಾರಿಸುವುದಿಲ್ಲ ಎಂದು ಕೇಳಿದ್ದ. ಇದಕ್ಕೆ ಶಿಕ್ಷಕ ನೀವು ಯಾರು ನನಗೆ ಗೊತ್ತಿಲ್ಲ, ನಿಮ್ಮ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದಾಗ, ನೀನು ಕತ್ತೆ ಕಾಯುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಮುಖ್ಯ ಶಿಕ್ಷಕರನ್ನು ನಿಂದಿಸಿ ಅವರ ಶರ್ಟ್ ಕಾಲರ್ ಹಿಡಿದು ತಲೆ ಹಾಗೂ ಕಪ್ಪಾಳದ ಮೇಲೆ ಹೊಡೆದು ಬಳಿಕ ಮತ್ತೊಬ್ಬ ವ್ಯಕ್ತಿ ಅವನ ಜೊತೆಯಲ್ಲಿ ಬಂದು ಇಬ್ಬರು ಸೇರಿ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಕ್ರಮಕೈಗೊಂಡು ರಕ್ಷಣೆ ನೀಡುವಂತೆ ಮುಖ್ಯ ಶಿಕ್ಷಕ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.