ಕೆ.ಆರ್.ಪೇಟೆ: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ತಮ್ಮ ಮನೆಯ ಮುಂದೆ ಡ್ಯಾನ್ಸ್ ಮಾಡಲು ನಿರಾಕರಿಸಿದರೆಂಬ ಕ್ಷುಲ್ಲಕ ಕಾರಣಕ್ಕೆ ನಾಲ್ವರು ಯುವಕರನ್ನು ಮನೆಯಲ್ಲಿ ಕೈಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆಗೆ ರೈತ ಮುಖಂಡ ಪಿ.ಬಿ.ಮಂಚನಹಳ್ಳಿ ನಾಗೇಗೌಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿರುವ ಘಟನೆ ಕೆ.ಆರ್ .ಪೇಟೆ ತಾಲೂಕಿನ ಶೀಳನೆರೆ ಹೋಬಳಿ ಪಿ.ಬಿ.ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರು: ಪಿ.ಬಿ.ಮಂಚನಹಳ್ಳಿ ಗ್ರಾಮದ ಯುವ ಮುಖಂಡರಾದ ಧರ್ಮರಾಜ್, ದೊರೆಸ್ವಾಮಿ, ಎಚ್.ಡಿ.ದರ್ಶನ್, ಎಂ.ಎನ್.ಕುಮಾರ್ ಗಾಯಗೊಂಡ ಯುವಕರು. ಡ್ಯಾನ್ಸ್ ಮಾಡಲು ನಿರಾಕರಣೆ: ರೈತ ಮುಖಂಡ ನಾಗೇಗೌಡ ಹಾಗೂ ಕಾಂತರಾಜು, ಪ್ರಭಾಕರ್, ಸುಭಾಷ್, ಶಿವ, ನಂದೀಶ್, ಬಾಲರಾಜ್, ಮಂಜೇಗೌಡ, ಸತೀಶ್ ಇತರರು ಸೇರಿ ತಮ್ಮ ಮನೆ ಬಳಿ ಡ್ಯಾನ್ಸ್ ಮಾಡಲು ನಿರಾಕರಿಸಿದ ಯುವಕರನ್ನು ಮಾತುಕತೆ ಯಲ್ಲಿ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಧರ್ಮರಾಜ್, ದೊರೆ ಸ್ವಾಮಿ, ಎಚ್.ಡಿ.ದರ್ಶನ್, ಎಂ.ಎನ್.ಕುಮಾರ್‌ರನ್ನು ಮನೆಗೆ ಕರೆಸಿ ಹಗ್ಗದಿಂದ ಕೈಕಾಲು ಕಟ್ಟಿ ದೊಣ್ಣೆ, ರಿಪೀಸು ಪಟ್ಟಿಗಳಿಂದ ಮನಸೋ ಇಚ್ಚೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಯುವಕರ ಚೀರಾಟ ಕೇಳಿ ಗ್ರಾಮಸ್ಥರು ಬಂದು ಯುವಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ಸೇರಿಸಿದ ಪೊಲೀಸರು: ಆಗಲೂ ಬಿಡದೇ ಪೊಲೀಸರಿಗೆ ಮಾಹಿತಿ ನೀಡಿ ಮನೆಗೆ ನುಗ್ಗಿ ನಮಗೆ ಹಲ್ಲೆ ಮಾಡಲು ಯತ್ನಿಸಿ ದ್ದಾರೆ. ಹೀಗಾಗಿ ನಾವೇ ಕೈಕಾಲು ಕಟ್ಟಿ ಹಾಕಿದ್ದೇವೆ ಎಂದು ನಾಗೇ ಗೌಡ ಮಾಹಿತಿ ನೀಡಿದ್ದಾರೆ. ಕೂಡಲೇ ಪಿ.ಬಿ.ಮಂಚನಹಳ್ಳಿ ಗ್ರಾಮಕ್ಕೆ ದೌಡಾ ಯಿಸಿದ ಪಟ್ಟಣ ಪೊಲೀಸರು ಕೈಕಾಲು ಕಟ್ಟಿ ಹಾಕಿದ್ದ ಯುವಕರನ್ನು ಬಿಡಿಸಿ, ಗಾಯಗೊಂಡು ಅಸ್ವಸ್ಥಗೊಂಡಿದ್ದ ಯುವಕರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನ್ಯಾಯಾಂಗ ಬಂಧನ: ಘಟನೆ ಸಂಬಂಧ ಯುವ ಮುಖಂಡ ಎಂ.ಎನ್.ಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಯುವಕರ ಕೈಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆಗೆ ರೈತ ಮುಖಂಡ ನಾಗೇಗೌಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದ್ದಾರೆ.