ಬೆಂಗಳೂರು: ಮಾಜಿ ಕಾರ್ಪೊರೇಟರ್ ನಾಗರಾಜ್ ಮತ್ತು ಮಕ್ಕಳು ಅವರ ಸಂಬಂಧಿ ಮಹಿಳೆ ಹಾಗೂ ಪುತ್ರಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಗರಾಜ್, ಮಕ್ಕಳಾದ ಗಾಂಧಿ, ಶಾಸ್ತ್ರೀ ಹಾಗೂ ಇತರರ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆರೋಪಿಗಳಿಂದ ಗಂಭೀರವಾಗಿ ಹಲ್ಲೆಗೊಳಗಾದ ನಾಗರಾಜ್ ಸಹೋದರ ದಿವಂಗತ ಧರ್ಮನ ಪತ್ನಿ ಚಾಮುಂಡೇಶ್ವರಿ ಮತ್ತು ಪುತ್ರಿ ಶ್ವೇತಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಕುಟುಂಬದ ಆಸ್ತಿ ವಿಚಾರವಾಗಿ ನಾಗರಾಜ್ ಮತ್ತು ಈತನ ಸಹೋದರ ಧರ್ಮ ನಡುವೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು.
ಇದೇ ವಿಚಾರವಾಗಿ ಒಂದೆರಡು ಬಾರಿ ಧರ್ಮನ ಮೇಲೆ ನಾಗರಾಜ್ ಹಲ್ಲೆ ಕೂಡ ನಡೆಸಿದ್ದ. ಒಂದು ವರ್ಷದ ಹಿಂದೆ ಧರ್ಮ ಮೃತಪಟ್ಟಿದ್ದ. ಬಳಿಕ ಧರ್ಮನ ಪತ್ನಿ ಚಾಮುಂಡೇಶ್ವರಿಯಿಂದ ಆಸ್ತಿ ಕಬಳಿಸಲು ನಾಗರಾಜ್ ಯತ್ನಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹಲ್ಲೆ ಮಾಡಿ ಪರಾರಿ: ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಾಗರಾಜ್, ಮಕ್ಕಳಾದ ಗಾಂಧಿ, ಶಾಸಿ ಹಾಗೂ ಇತರೆ ನಾಲ್ವರು ಆರೋಪಿಗಳು ಮಾರಕಾಸ್ತ್ರ ಸಮೇತ ಚಾಮುಂಡೇಶ್ವರಿಯವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಜತೆಗೆ ಪುತ್ರಿ ಶ್ವೇತಾ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೂಗಾಟ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ತಾಯಿ-ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪತ್ತೆಗೆ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಮೂವರು ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ. ಈ ಹಿಂದೆ ನೋಟು ಬದಲಾವಣೆ ಪ್ರಕರಣದಲ್ಲಿ ನಾಗರಾಜ್ ಹಾಗೂ ಇಬ್ಬರು ಮಕ್ಕಳು ಜೈಲು ಸೇರಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು.