ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿ ಮನೆ ಮೇಲೆ ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, 3 ಕೋಟಿ ರೂ. ಮೌಲ್ಯದ ಚೆಕ್‌ಗಳು ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿ ಬೆನ್ನಲ್ಲೇ ಆರೋಪಿಗಳಾದ ಶಾಮಣ್ಣ ಗಾರ್ಡನ್ ನಿವಾಸಿ ಶ್ರೀರಾಮ ಮತ್ತು ಆತನ ಪುತ್ರ ಕಲ್ಯಾಣ್ ಕುಮಾರ್ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳು ಪರವಾನಗಿ ಇಲ್ಲದೇ ಮಾಸಿಕ ಶೇ.5ರಿಂದ 10 ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಭದ್ರತೆಗಾಗಿ ಚೆಕ್, ಆಸ್ತಿ ಪತ್ರಗಳನ್ನು ಅಡಮಾನ ಇಟ್ಟುಕೊಂಡು ದುಬಾರಿ ಬಡ್ಡಿ ವಿಧಿಸಿ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಸಹಕಾರ ಇಲಾಖೆಗೆ ದೂರು ನೀಡಿದ್ದರು. ಈ ಸಂಬಂಧ ಇಲಾಖೆ ಅಧಿಕಾರಿಗಳು ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಸಿಸಿಬಿಗೆ ವರ್ಗಾಯಿಸಲಾಗಿದ್ದು, ಕೋರ್ಟ್ ಅನುಮತಿ ಪಡೆದು ಸಿಸಿಬಿ ಪೊಲೀಸರು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಮಾ.28ರಂದು ಶಾಮಣ್ಣ ಗಾರ್ಡನ್‌ನಲ್ಲಿರುವ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಸಾರ್ವಜನಿಕರಿಗೆ ದುಬಾರಿ ದರದಲ್ಲಿ ಬಡ್ಡಿಯನ್ನು ನೀಡಿ ಅವರಿಂದ ಭದ್ರತೆಗಾಗಿ ಪಡೆದುಕೊಂಡಿದ್ದ ವಿವಿಧ ಬ್ಯಾಂಕ್‌ಗಳ ಸುಮಾರು 145ಕ್ಕೂ ಹೆಚ್ಚು ಚೆಕ್‌ಗಳು, ವಾಹನಗಳ ಆರ್.ಸಿ.ಕಾರ್ಡ್‌ಗಳು, ಆನ್‌ಡಿಮ್ಯಾಂಡ್ ಪ್ರಾಮಿಸರಿ ನೋಟ್, ಆಸ್ತಿ ಪತ್ರಗಳು ಹಾಗೂ ಸಾರ್ವಜನಿಕರ ಬಡ್ಡಿ ಹಣದಿಂದ ಖರೀದಿಸಿದ್ದ ಹಲವು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಮತ್ತೂಂದೆಡೆ ಆರೋಪಿಗಳು, 100ಕ್ಕೂ ಹೆಚ್ಚು ಜನರಿಗೆ ಲಕ್ಷಾಂತರ ರೂ. ಅನ್ನು ದುಬಾರಿ ದರದಲ್ಲಿ ಬಡ್ಡಿಗೆ ಸಾಲ ನೀಡಿದ್ದು, ಬಡ್ಡಿ ಕಟ್ಟಲು ಸಾಧ್ಯವಾಗದ ವ್ಯಕ್ತಿಗಳ ಮನೆ ಬಳಿ ಹೋಗಿ ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದುಬಾರಿ ಬಡ್ಡಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ. ಇದೇ ವೇಳೆ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಇದುವರೆಗೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದಾರೆ ಎಂದು ಆಯುಕ್ತರು ಹೇಳಿದರು.