ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಿವಾಜಿನಗರ ಸಂಚಾರ ಠಾಣೆ ಎದುರು ಬೀದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಹಲ್ಲೆ ನಡೆಸಿದ್ದಾರೆ ಎನ್ನಲಾದ ಶಿವಾಜಿನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್, ಸಿಬ್ಬಂದಿ ಮಂಜುನಾಥ್, ಚೆನ್ನಪ್ಪ, ಮೌಲ್‌ಸಾಬ್, ಶ್ರೀಕಾಂತ್, ಬಾಕೃಷ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮತ್ತೂಂದೆಡೆ ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಶಿವಾಜಿನಗರ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಡ್ವಿನ್‌ರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಬಿಎಂಪಿ ಅಧಿಕಾರಿಗಳು ಶಿವಾಜಿನಗರದ ಮೂರು ವಾರ್ಡ್‌ಗಳ ಬೀದಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುತ್ತಿದ್ದರು. ಇದಕ್ಕೆ ಕೆಲ ಬೀದಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ರಕ್ಷಣೆಗೆ ನಿಯೋಜನೆಗೊಂಡಿದ್ದ ಸಂಚಾರ ಪೊಲೀಸರು ಮತ್ತು ಬೀದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ಹೋದಾಗ ಶಿವಾಜಿನಗರ ಶಾಸಕ ರೋಷನ್ ಬೇಗ್ ಆಪ್ತರಾದ ಸತೀಶ್ ಮತ್ತು ಸಿದ್ದಿಕ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಬೀದಿ ವ್ಯಾಪಾರಿಗಳು ಶಿವಾಜಿನಗರ ಸಂಚಾರ ಠಾಣೆ ಎದುರು ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಘಟನೆ ವಿಕೋಪಕ್ಕೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನೂರಾರು ಮಂದಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತರಲಾಯಿತು.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರೋಷನ್ ಬೇಗ್, ಬೀದಿ ಬದಿ ವ್ಯಾಪಾರಿಗಳ ಮೇಲೆ ಸಂಚಾರಿ ಪೊಲೀಸರ ಹಲ್ಲೆ ಪ್ರಕರಣ ಸಂಬಂಧ ಗೃಹ ಸಚಿವರಿಗೆ ದೂರು ನೀಡಲಾಗಿದೆ. ತಪ್ಪು ಮಾಡಿದ್ದರೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಬೇಕಿತ್ತು. ಆದರೆ, ನಡು ರಸ್ತೆಯಲ್ಲೇ ದುಂಡಾವರ್ತನೆ ತೋರಿರುವುದು ಸರಿಯಲ್ಲ. ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು.