ಚನ್ನರಾಯಪಟ್ಟಣ: ಪಟ್ಟಣ ಶ್ರೀಕಂಠಯ್ಯ ವೃತ್ತದಲ್ಲಿನ ಖಾಸಗಿ ಕಾಲೇಜಿನ ಮಹಿಳಾ ಸಿಬ್ಬಂದಿ ಹಿಂಬಾಲಿಸಿ ಬಂದು ಚುಡಾಯಿಸಿದ ರೋಡ್ ರೋಮಿಯೋಗಳಿಗೆ ಅದೇ ಕಾಲೇಜಿನ ಪ್ರಾಂಶುಪಾಲರು ಬುದ್ಧಿ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡು ಯುವಕರು ಪ್ರಾಂಶುಪಾಲರ ಕಾರು ಜಖಂ ಮಾಡಿ ಥಳಿಸಿದ್ದಾರೆ. ಪಟ್ಟಣದ ರೋಹಿತ್, ಬೆಕ್ಕಾ ಚೋಳೇನಹಳ್ಳಿ ಸ್ವಾಮಿ, ಮಕಾನ್ ಶರತ್, ತೀರ್ಥ ಹಲ್ಲೆ ಮಾಡಿದ ಆರೋಪಿಗಳು, ನರ್ಸಿಂಗ್ ಕಾಲೇಜಿನ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಬರುವ ಸಮಯ ನೋಡಿಕೊಂಡಿದ್ದ ರೋಡ್ ರೋಮಿಯೋಗಳು ಹಲವು ದಿವಸಗಳಿಂದ ಬೈಕಿನಲ್ಲಿ ಹಿಂಬಾಲಿಸಿ ಚುಡಾಯಿಸುತ್ತಿದ್ದರು. ಇದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲ ಬಿ.ಎಲ್. ಅರುಣ್ ಕುಮಾರ್ ಬುದ್ಧಿ ಹೇಳಿದ್ದಾರೆ.
ಉದ್ಧಟತನದ ಪರಮಾವದಿ: ನಾನು ಹಲವು ದಿವಸಗಳಿಂದ ಗಮನಿಸಿದ್ದೇನೆ. ನಮ್ಮ ಕಾಲೇಜಿನ ಮಹಿಳಾ ಸಿಬ್ಬಂದಿಯನ್ನು ಯಾಕೆ ಹಿಂಬಾಲಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಬಡ್ಡಿ ಕುಮಾರ್ ಪುತ್ರ ರೋಹಿತ್ ಇದನ್ನು ಕೇಳಲು ನೀವ್ಯಾರು ಎಂದು ಮರು ಪ್ರಶ್ನೆ ಮಾಡಿದ್ದಾನೆ. ನಾನು ಕಾಲೇಜಿನ ಪ್ರಾಂಶುಪಾಲ ಎಂದು ಉತ್ತರ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ರೋಹಿತ್ ಜೊತೆ ಬೈಕಿನಲ್ಲಿದ್ದ ಚೋಳೇನಹಳ್ಳಿ ಸ್ವಾಮಿ ಬೈಕಿನಿಂದ ಕೆಳಗೆ ಇಳಿದಿದ್ದಾರೆ. ಅಷ್ಟರಲ್ಲಿ ರೋಹಿತ್ ತನ್ನ ಸ್ನೇಹಿತ ರಾದ ಮಾಕಾನ್ ಟೈಲರ್ ರಮೇಶ್ ಪುತ್ರ ಶರತ್, ಪತ್ರಬರಹಗಾರ ಗೂರಮಾರನಹಳ್ಳಿ ತೀರ್ಥ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರೋಹಿತ್ ಸ್ನೇಹಿತರು ಕಾಲೇಜಿನ ಮುಂಭಾಗದಲ್ಲಿದ್ದ ಪ್ರಾಂಶುಪಾಲ ಅರುಣ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ರೋಹಿತ್ ಹಾಗೂ ಸ್ನೇಹಿತರು ಕಾರಿನ ಗಾಜು ಜಖಂ ಮಾಡಿದಲ್ಲದೇ, ಕಾರಿನ ಬಾಗಿಲು ಮುರಿದು ಪ್ರಾಂಶುಪಾಲರನ್ನು ಹೊರಗೆ ಎಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಡಿ.ವಿನೋದ್, ಬಿ.ಎಸ್. ಕಿರಣ್, ಜಿ.ಎಲ್. ಜೀವನ್ ಸ್ಥಳಕ್ಕೆ ಆಗಮಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.