ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‌ಗಳ ಮೇಲೆ ಶನಿವಾರ ಏಕಾಏಕಿ ದಾಳಿ ನಡೆಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಮಳಿಗೆಗಳಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಶನಿವಾರ ನಗರದ ಒರಾಯನ್ ಮಾಲ್, ಗರುಡಾ ಮಾಲ್, ಫೋರಂ ಮಾಲ್, ಫಿನಿಕ್ಸ್ ಮಾಲ್, ಆರ್‌ಎಂಝಡ್, ರಾಯಲ್ ಮೀನಾಕ್ಷಿ ಮಾಲ್‌ಗಳಲ್ಲಿನ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಸಾವಿರ ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು, 13.15 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಮಾರ್ಷಲ್‌ಗಳೊಂದಿಗೆ ಮಾಲ್‌ಗಳಲ್ಲಿನ ಹೋಟೆಲ್, ಫುಡ್‌ಕೋರ್ಟ್‌ಗಳಿಗೆ ಭೇಟಿ ನೀಡಿದ ವೈದ್ಯಾಧಿಕಾರಿಗಳು, ನಿಷೇಧಿತ ಪ್ಲಾಸಿಕ್ ಬಳಕೆ ಮಾಡುತ್ತಿರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಅಡುಗೆ ಮನೆಗಳಲ್ಲಿ ನೈರ್ಮಲ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಿದ್ದಾರೆ.
ಮೊದಲಿಗೆ ಒರಾಯನ್ ಮಾಲ್‌ನಲ್ಲಿ ಮೂರು ಉದ್ದಿಮೆಗಳಿಂದ 65 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡಿರುವ ಅಧಿಕಾರಿಗಳು 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಗರುಡಾ ಮಾಲ್‌ನಲ್ಲಿ 40 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡು 1.25 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಫೋರಂ ಮಾಲ್‌ನಲ್ಲಿ 25 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡು 2.10 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ಇದರೊಂದಿಗೆ ಫಿನಿಕ್ಸ್‌ನಲ್ಲಿ 700 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದು 2.80 ಲಕ್ಷ ರೂ., ಆರ್‌ಎಂಝಡ್‌ನಲ್ಲಿ 180 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡು 2.80 ಲಕ್ಷ ರೂ. ಹಾಗೂ ಮೀನಾಕ್ಷಿ ಮಾಲ್‌ನಲ್ಲಿ ಕಸ ಬೇರ್ಪಡಿಸದ ಹಿನ್ನೆಲೆಯಲ್ಲಿ 1.50 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ನಾಲ್ಕು ಹೋಟೆಲ್‌ಗಳ ಮೇಲೆ ಕ್ರಮಕೈಗೊಂಡಿದ್ದು, ತಾತ್ಕಾಲಿಕವಾಗಿ ಅವುಗಳನ್ನು ಮುಚ್ಚಿಸಲಾಗಿದೆ. ಇದರೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳದ ಹಾಗೂ ಕಸವನ್ನು ಬೇರ್ಪಡಿಸದಿರುವ ಕೆಲ ಉದ್ದಿಮೆಗಳಿಗೆ ಎಚ್ಚರಿಕೆ ನೋಟಿಸ್ ನೀಡಿದ್ದು, ಪುನರಾವರ್ತನೆಯಾದರೆ ಉದ್ದಿಮೆಗಳಿಗೆ ಬೀಗ ಹಾಕುವ ಎಚ್ಚರಿಕೆ ನೀಡಲಾಗಿದೆ.