ಬಮಕೊ: ಮಾಲಿ ಸೈನ್ಯದ ಮೇಲೆ ನಡೆದ ಉಗ್ರ ದಾಳಿಯಲ್ಲಿ 42 ಮಂದಿ ಯೋಧರು ಸಾವನ್ನಪ್ಪಿ, 22 ಮಂದಿ ಸೈನಿಕರು ಗಾಯಗೊಂಡ ಘಟನೆ ನಡೆದಿದೆ. ಈ ಘಟನೆಯು ಟೆಸ್ಸಿಟ್ ನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಪಶ್ಚಿಮ ಆಫ್ರಿಕಾದ ಸಹೇಲ್ ಪ್ರದೇಶದಾದ್ಯಂತ ಹರಡಿರುವ ಉಗ್ರಗಾಮಿ ಗುಂಪುಗಳಿಂದ ದಶಕದ ಕಾಲದ ದಂಗೆಯನ್ನು ಎದುರಿಸುತ್ತಿರುವ ಮಾಲಿಯನ್ ಸೇನೆಯ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ ಎನ್ನಲಾಗಿದೆ.
ಟೆಸ್ಸಿಟ್ ನಗರದಲ್ಲಿ ಮಾಲಿ ಸೇನಾ ಘಟಕಗಳು ಸಶಸ್ತ್ರ ಭಯೋತ್ಪಾದಕ ಗುಂಪುಗಳ ಸಂಕೀರ್ಣ ಮತ್ತು ಸಂಘಟಿತ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದವು. ಗ್ರೇಟರ್ ಸಹಾರಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮಾಡಿರಬಹುದಾದ ಈ ದಾಳಿಯಲ್ಲಿ, ಡ್ರೋನ್ ಗಳು, ಸ್ಫೋಟಕಗಳು, ಕಾರ್ ಬಾಂಬ್‌ಗಳು ಮತ್ತು ಫಿರಂಗಿಗಳನ್ನು ಬಳಕೆ ಮಾಡಲಾಗಿತ್ತು ಎಂದು ” ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಕೆಲವು ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ ಮಾಲಿಯನ್ ಯೋಧರು 37 ಮಂದಿ ಉಗ್ರರನ್ನೂ ಹೊಡೆದುರುಳಿಸಿದ್ದಾರೆ. ಮೊದಲು 17 ಮಂದಿ ಸೈನಿಕರು ಹುತಾತ್ಮರಾಗಿ, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸೇನೆ ಹೇಳಿತ್ತು.
ಇದನ್ನೂ ಓದಿ:ಪ್ರವೀಣ್ ಹಂತಕರಿಗೆ ತೆರೆಮರೆಯಲ್ಲಿ ರಕ್ಷಣೆ ? ಆರು ಜಿಲ್ಲೆಗಳಲ್ಲಿ ಹರಡಿರುವ ಹಂತಕರ ಅಡಗು ತಾಣ
ಮಾಲಿಯು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಹತಾಶೆಯಿಂದ 2020 ರಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿದ ಮಿಲಿಟರಿಯು ಅಲ್ಲಿ ಅಧಿಕಾರ ನಡೆಸುತ್ತಿದೆ. ಆದರೆ ದಾಳಿಗಳು ಈಗಲೂ ಸಾಮಾನ್ಯವಾಗಿವೆ. ಜುಲೈ ಅಂತ್ಯದಲ್ಲಿ ಅಲ್ ಖೈದಾ ಅಂಗಸಂಸ್ಥೆಯು ದೇಶದ ಪ್ರಮುಖ ಸೇನಾ ನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.